Tuesday, September 16, 2008

ಕೆ.ಎಸ್.ನರಸಿಂಹಸ್ವಾಮಿ - ನನ್ನ ನೆಚ್ಚಿನ ಕವಿಯ..ಮೆಚ್ಚಿನ ಕವನಗಳು


ಕೆ.ಎಸ್.ನರಸಿಂಹಸ್ವಾಮಿ ನನ್ನ ಅಚ್ಚು ಮೆಚ್ಚಿನ ನೆಚ್ಚಿನ ಕಬ್ಬಿಗ...ಅವರ ಕವನಗಳನ್ನ ಅದೆಷ್ಟು ಬಾರಿ ಓದಿದರೂ ಭಾವ ಬರಿದಾಗದ ಚಿಲುಮೆಯೆನಿಸುತ್ತೆ...ಹಾಗೆ ಓದಿದ ಕವನಗಳಲ್ಲಿ ತೀರಾ ಇಷ್ಟವಾದ ಸಾಲುಗಳನ್ನ ಒಂದೆಡೆ ಬರೆದಿಡುತ್ತೇನೆ... ನೆನಪಾದಾಗ ಆ ಸಾಲುಗಳನ್ನ ಓದಿದಂತೆಲ್ಲಾ ಕವನದೊಳಗಿನ ಭಾವ ಮನಸ್ಸನ್ನಾವರಿಸಿಬಿಡುತ್ತದೆ....ಅದೇನೋ ಹುರುಪು..ಅದೇನೋ ಪುಳಕ!
ಅವರ ಮುಕ್ಕಾಲು ಪಾಲು ಕವನಗಳು...ಮಡದಿ,ದಾಂಪತ್ಯ,ಪ್ರೀತಿ,ವಿರಹ,ಕನಸು,ನಿರೀಕ್ಷೆ,ಅಳು ಮುನಿಸುಗಳ ಬಗ್ಗೆ.... ಒಟ್ಟಾರೆ ಕೌಟುಂಬಿಕ ಜೀವನದ ಬಗ್ಗೆ ಅದೆಷ್ಟೊಂದು ಒಲವು! ಅಚ್ಚರಿಯೆನಿಸುತ್ತೆ!! ತಮ್ಮ ಪ್ರತಿ ಕವನಗಳಲ್ಲಿ ತುಂಬಿ ಬರೆದಿರುವ ಆ ಕಡುಭಾವನೆಗಳೇ ಓದುಗರನ್ನು ಸೆಳೆಯೋದು....:)
ಮಂತ್ರಮುಗ್ಧಗೊಳಿಸುವ ಕವನಗಳ ಒಡೆಯ ಕೆ.ಎಸ್.ನರಸಿಂಹ ಸ್ವಾಮಿಯವರಿಗೊಂದು ನಮನ!
ನನಗಿಷ್ಟವಾದ ಕವನಗಳು.."ಎದೆ ತುಂಬ ನಕ್ಷತ್ರ" & "ಮೈಸೂರು ಮಲ್ಲಿಗೆ" ಸಂಕಲನದಿಂದ...ಕವನದ ಶೀರ್ಷಿಕೆ ( )ಯೊಳಗೆ.
 
ಹಕ್ಕಿಯ ಹಾಡಿಗೆ ತಲೆದೂಗುವ ಹೂ
ನಾನಾಗುವ ಆಸೆ ( ಆಸೆ )

ಸಿರಿಗೆರೆಯ ನೀರಲ್ಲಿ ಬಿರಿದ ತಾವರೆಯಲ್ಲಿ
ಕೆಂಪಾಗಿ ನಿನ್ನ ಹೆಸರೂ....
ನಿನ್ನ ಪ್ರೇಮದ ಪರಿಯ ನಾನರಿಯೆ....ಕನಕಾಂಗಿ
ನಿನ್ನೊಳಿದೆ...ನನ್ನ ಮನಸು ( -ಗೆ )

ನವಿಲೂರಿನೋಳಗೆಲ್ಲ ನೀನೆ ಬಲು ಚೆಲುವೆ
ಅದಕೆ ನಮ್ಮಿಬ್ಬರಿಗೆ ನಾಳೆಯೇ ಮದುವೆ ( ಹಳ್ಳಿಯ ಚೆಲುವೆಗೆ )

ಒಂದಿರುಳು ಕನಸಿನಲಿ ನನ್ನವಳ ಕೇಳಿದೆನು
ಚೆಂದ ನಿನಗಾವುದೆಂದು?
ನಮ್ಮೂರು ಹೊನ್ನೂರು, ನಿಮ್ಮೂರು ನವಿಲೂರು
ಚೆಂದ ನಿನಗಾವುದೆಂದು ( ಪ್ರಶ್ನೆಗೆ ಉತ್ತರ )

ಕೀತಕೆಯ ಬನಗಳಲಿ ಸಂಚರಿಸದಿರು ಚೆಲುವೆ...
ಸರ್ಪಮಂದಿರವಂತೆ ಕಂಪಿನೊಡಲು ( ಎಚ್ಚರಿಕೆ )

ಮದುವೆಯಾಗಿ ತಿಂಗಳಿಲ್ಲ ನೋಡಿರಣ್ಣ ಹೇಗಿದೆ!
ನಾನು ಕೂಗಿದಾಗಲೆಲ್ಲ ಬರುವಳೆನ್ನ ಶಾರದೆ!
ಹಿಂದೆ ಮುಂದೆ ನೋಡದೆ, ಎದುರು ಮಾತನಾಡದೆ! ( ಬಾರೆ ನನ್ನ ಶಾರದೆ! )

ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು! ( ಮಾವನ ಮನೆಯಲ್ಲಿ )

ಒಬ್ಬಳೇ ಮಗಳೆಂದು ನೀವೇಕೆ ಕೊರಗುವಿರಿ?
ಒಬ್ಬಳೇ ಮಡದಿಯೆನಗೆ!
ಹಬ್ಬದೂಟದ ನಡುವೆ ಕಣ್ಣೀರ ಸುರಿಸದಿರಿ...
ಸುಮ್ಮನಿರಿ ಮಾವನವರೆ ( ಒಬ್ಬಳೇ ಮಗಳು )

ಹೋಗಿಬಾ ಬಂಗಾರ, ಸಾಕಿನಿತೆ ಶೃಂಗಾರ..
ಹೋಗಿ ಬಾ ಅವರ ಮನೆಗೆ
ಹೋಗಿ ಬಾ ಕರೆದಾಗ ; ಬೇಗ ಬಾ ನೆನೆದಾಗ..
ನಿಲ್ಲದೆಯೇ ನಿನ್ನ ಮನೆಗೆ! ( ಬಿಸಿಲ ಕೋಲು )

ಮೂರು ತಿಂಗಳು ಕಳೆದ ಮಾರನೆಯ ದಿವಸವೇ
ಬರುವೆನೆಂದಾಣೆಯಿಟ್ಟೊಲವ ಮಿಡಿದು,
ತೌರಿಗೊಡಿದ ಗೌರಿ ಮೂರು ತಿಂಗಳ ಮೇಲೆ
ವಾರವೊಂದಾದರೂ ಬಂದಿಲ್ಲವು..!
ಓಲೆ ತಲುಪಿರಬಹುದು; ನಿಲ್ಲಲಾರಳು ಇನ್ನು
ನಾಳೆ ಬರುವಳು ನನ್ನ ಪ್ರೇಮಲಹರಿ
ತೌರ ಬಳಗದ ಕೋಟೆ ಕೊತ್ತಲವ ದಾಟಿ ಬಹು
ದೇನು ಸುಲಭವೇ? ಇನ್ನು ಹುಡುಗಿ ಗೌರಿ ( ನಾಳೆ ಬರುವಳು ಗೌರಿ )

ತೌರಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು
ನಿಮ್ಮ ನೆನಸೆ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು
....
ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ
ನಾಳೆ ಮಂಗಳವಾರ; ಮಾರನೆಯ ದಿನ ನವಮಿ
ಆಮೇಲೆ ನಿಲ್ಲುವೇನೆ ನಾನು ಇಲ್ಲೇ? ( ಹೆಂಡತಿಯ ಕಾಗದ )

ಕಣ್ಣ ಹನಿಯು ಮಣಿಯ ತೆರದಿ
ಕಣ್ಣಿನೊಡವೆಯಾಯಿತು
ತುಟಿಗೆ ಬಂದ ಮಾತು ತಿರುಗಿ
ಬಂದ ಕಡೆಗೆ ಹೋಯಿತು ( ಪಶ್ಚಾತ್ತಾಪ )

ನಗುವಿಗೂ ಅಳುವಿಗೂ ನಡುವೆ ನಿಂತಿಹೆ ನೀನು
ನಾನದನು ಒಲವೆಂದು ಕರೆಯಲಾರೆ
ಹಗಲಿಗೂ ಇರುಳಿಗೂ ನಡುವೆ ಬಂದಿದೆ ಸಂಜೆ
ನಾನದರ ಚೆಲುವನ್ನು ಮರೆಯಲಾರೆ ( ತನ್ನ ಪಾಡಿಗೆ ತಾನು ಲೋಕದುರುಳು )

ಮುಳಿಸು ಮಾವನ ಮೇಲೆ; ಮಗಳೇನ ಮಾಡಿಹಳು?
ನಿಮಗೆತಕೀ ಕಲ್ಲು ಮನಸ್ಸು?
ಹೋಗಿ ಬನ್ನಿರಿ, ಒಮ್ಮೆ ಕೈ ಮುಗಿದು ಬೇಡುವೆನು
ಅಮ್ಮನಿಗೆ ನಿಮ್ಮದೇ ಕನಸು
.... ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಳಪ್ಪನೆಯೇ ದೊರೆಯೇ? ( ಬಳೆಗಾರನ ಹಾಡು )

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!
ಹೆಂಡತಿಯೊಬ್ಬಳು ಹತ್ತಿರವಿದ್ದರೆ...ನಾನೂ ಒಬ್ಬ ಸಿಪಾಯಿ! ( ಹೆಂಡತಿಯೊಬ್ಬಳು )

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ..ಬಂಗಾರವಿಲ್ಲದಾ ಬೆರಳು..
ತಗ್ಗಿರುವ ಕೊರಳಿನಾ ಸುತ್ತ ಕರಿಮಣಿ ಒಂದೆ, ಸಿಂಗಾರ ಕಾಣದಾ ಹೆರಳು.. ( ಅಕ್ಕಿ ಆರಿಸುವಾಗ )
ನನ್ನವಳು ನನ್ನೆದೆಯ ಹೊನ್ನಾಡನಾಳುವಳು
ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ
.... ನಮಗಿಲ್ಲ ನೂರು ಚಿಂತೆ...ನಾವು ಗಂಧರ್ವರಂತೆ! (ಗೃಹಲಕ್ಷ್ಮಿ )

ಬೆಳಗಾಗ ಹೋದವರು ಸಂಜೆಗೂ ಬಾರದೆಯೆ
ತುಂಬಿಕೊಂಡಿತು ಇರುಳು ಬಾನತುಂಬ ( ಅವರ ಮಾತು )

ಹೆರಿಗೆಯ ನೋವನೆ ಹಾಡುವಿರೇತಕೆ
ಪಕ್ಕದಲೇನಿದೆ ನೋಡಿ
ಒಲವಿನ ಬಳ್ಳಿಯ ಚೆಲುವಿನ ಮೊಗ್ಗಿಗೆ
ಒಪ್ಪುವಂತದನೆ ಹಾಡಿ (ಹೆರಿಗೆಯಾಸ್ಪತ್ರೆಯಲ್ಲಿ )