Saturday, December 26, 2009

ಕಲಾ ದಿನ...

ದಿನ ನಿತ್ಯ ಮಾಡೋ ಕೆಲಸಗಳ ಹೊರತಾಗಿ ಆಗೀಗೊಮ್ಮೆ ಮಾಡುವ ಹೊಸ ರೀತಿಯ ಚಟುವಟಿಕೆಗಳು ಹೊಸತನ ತರುವುದರೊಂದಿಗೆ ನಮ್ಮನ್ನ ಕ್ರಿಯಾಶೀಲರನ್ನಾಗಿಸುತ್ತವೆ. ಸ್ಟ್ಯಾಗ್ನೆಂಟ್ ಅನಿಸುವಿಕೆ ಕಡಿಮೆಯಾಗುತ್ತೆ. ನನಗೆ ಈವತ್ತೊಂದು ಸಖತ್ ದಿನವಾಗಿತ್ತು.

ಮುಂದಿನ ತಿಂಗಳ ಚಿತ್ರ ಸಂತೆಯಲ್ಲಿ ನಾನು ಮತ್ತು ಪಾಲ ಭಾಗವಹಿಸಲು ತುಂಬಿದ ಅಪ್ಲಿಕೇಶನ್ನ ಚಿತ್ರ ಕಲಾ ಪರಿಷತ್ನಲ್ಲಿ ಕೊಟ್ಟು, ಅರಮನೆ ರಸ್ತೆ ಮೂಲಕ ಹಿಂತಿರುಗುತ್ತಿರುವಾಗ ಬಸ್ ಕಿಟಕಿಯಿಂದ ಕಂಡ "ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯದ (National Gallery of Modern Art)" ಹೊರಗಿನ ಚಿತ್ರಗಳು ಹಾಗೇ ಸೆಳೆದವು.ಅಲ್ಲೇ ಸ್ಟಾಪ್ ಕೊಟ್ಟಿದ್ದರಿಂದ ಮರು ಆಲೋಚಿಸದೆ ಬಸ್ಸಿಂದ ಕೆಳಗಿಳಿದು ಹೊರಟೆ. :)

ಪ್ರವೇಶ ದರ ೧೦ ರೂ. ಕ್ಯಾಮೆರಾದಿಂದ ಪೋಟೋ ತೆಗೆಯುವಂತಿಲ್ಲ ಕಣ್ಗಳ ಮೂಲಕ ತೆಗೆಯಬಹುದಷ್ಟೇ!!

ಒಳ ಹೋದಂತೆ ವಾವ್! ಕೋಣೆಯೊಳಗಿನ್ನೊಂದು ಮತ್ತೊಂದು ಮಗದೊಂದು ಕೋಣೆಗಳು!! ಪ್ರತಿ ಕೋಣೆಯೊಳಗೂ ಬೆರಗುಗೊಳಿಸುವ ರೇಖಾ,ಜಲ,ಆಯಿಲ್ ವರ್ಣ ಚಿತ್ರಗಳು!! ೧೮೫೦ ರಿಂದ ಈಗಿನವರೆಗಿನ ಹಲವಾರು ಕಲಾವಿದರ ಚಿತ್ರಗಳು. ಮೈಸೂರು ಶೈಲಿಯಿಂದ ಮಾಡ್ರನ್ ಆರ್ಟ್ವರೆಗೆ ಲೆಕ್ಕವಿರಿಸಲಾಗದಷ್ಟು ಕಲಾಕೃತಿಗಳು!! ನನಗಿಷ್ಟವಾದ ಕಲಾಕೃತಿಗಳ ಮತ್ತು ಕಲಾವಿದರ ಹೆಸರುಗಳನ್ನ ಟಿಕೇಟ್ ಹಿಂದೆ ಗೀಚಿಕೋಳ್ಳುತ್ತಾ ಹೋದೆ.:)

ರವೀಂದ್ರನಾಥ್ ಟ್ಯಾಗೋರ್,
ಅರಬಿಂದ ನಾಥ್ ಟ್ಯಾಗೋರ್,
ರಾಜಾ ರವಿವರ್ಮ,
ಶಾರ್ದಾ ಯುಕಿಲ್ ರ Chaitanya,
ಮಹದೇವನ್ ಮೆನನ್ ರ Cow Heards & Bamboo Grooves
ಎಮ್.ಎ.ಆರ್ ರ Omar Khayyam,
ಹೇಮ ಉಪಾಧ್ಯಾಯರ The Red End,
ಖೇಮ್ರಾಜ್ ರ Une Vie,
ಜಗದೀಶ್ ಚಂದರ್ ರವರ After Image II
ಸೋಹನ್ ಕದ್ರಿಯವರ Invocation,
ನಂದಲಾಲ್ ಬೋಸ್ ರ Chandilka,
ಅಮ್ರಿತಾ ಷೇರ್ಗಿಲ್ ರವರ Village Girl,
ಜಾಮಿನಿ ರಾಯ್ ರವರ Bengali Woman,
ಕೃಷ್ನಮಾಚಾರಿ,
ಹರ್ಶ,
ಮುಖುಲ್ ದೇ, 
.
.
.
.
.
.
ಎಣಿಸಲಾರದಷ್ಟು ಚಿತ್ರಗಳು!!! ಚೆಂದದ ಅನುಭವ

ಜೊತೆಗೆ ಸತ್ಯಜಿತ್ ರೇ ರವರ "ಸಿನೆಮಾ ಮೇಕಿಂಗ್" ಬದುಕಿನ ಹಲವಾರು ಪೋಟೋಗಳನ್ನ ನೋಡುವ ಅವಕಾಶ ಸಿಕ್ಕಿದ್ದು ಸಕತ್ ಖುಷಿಯಾಯ್ತು!!.ಸತ್ಯಜಿತ್ ರೇ ಬಗ್ಗೆ ಹೆಚ್ಚು ಗೊತ್ತಿರದಿದ್ದರೂ ಆ ಪೋಟೋಗಳಲ್ಲಿ ಅವರ ಮುಖದಲ್ಲಿ ಎದ್ದು ಕಾಣುವ "ಪ್ರತಿ ಕ್ಷಣವನ್ನೂ ಬಿಡದೆ ಬದುಕಿದ ತೀಕ್ಷ್ಣತೆ ಮತ್ತು ಆ ಪ್ಯಾಶನ್, ಮಾಡುವ ಕೆಲಸದಲ್ಲಿನ ಪರ್ಫೆಕ್ಟಿಸಮ್" ಹೆಚ್ಚು ಹಿಡಿಸಿತು. ಜೊತೆಗೆ ಅವರ ಸಿನೆಮಾಗಳನ್ನ ನೋಡುವ ಕುತೂಹಲವನ್ನೂ ಹುಟ್ಟಿಸಿದೆ.

ಈ ಆರ್ಟ್ ಗ್ಯಾಲರಿಯನ್ನ ಹಾಗೇ ಒಮ್ಮೆ ನೋಡಲು ಮಿನಿಮಮ್ ಅರ್ಧ ದಿನ, ವಿವರವಾಗಿ ನೋಡಲು ಒಂದು ದಿನ ಪೂರ್ತಿಯಾಗಿ ಬೇಕು. :) ನೀವು ನೋಡಲು ಮಾತ್ರ ಮಿಸ್ ಮಾಡಬೇಡಿ.


------------------------------------------------

ನಂತರ ಚರ್ಚ್ ಸ್ಟೀಟ್ನಲ್ಲಿನಲ್ಲಿನ ಪುಸ್ತಕದಂಗಡಿಗಳಲ್ಲಿ ಸುತ್ತಾಡಿ, ಹೈದರಾಬಾದ್ ಬಿರಿಯಾನಿ ಸವಿ ನೋಡಿ, ನಾಲ್ಕರ ಹೊತ್ತಿಗೆ ಮಿಡ್ಫ಼ೋರ್ಡ್ ರೋಡ್ ಕಡೆ ಪಯಣ.

ಈವತ್ತು ಜನಾರ್ಧನ ಸ್ವಾಮಿಯವರ (ಜೆ.ಸ್ವಾಮಿಯೆಂದು ಹೆಚ್ಚು ಪರಿಚಿತ) "ವ್ಯಂಗ್ಯ ಚಿತ್ರಗಳ" ಪ್ರದರ್ಶನ "Indian Institute of Cartoonists" ನಲ್ಲಿತ್ತು. ಬೆಳಗಿನ ಕಾರ್ಯಕ್ರಮಗಳೆಲ್ಲಾ ಬೆಳಗ್ಗೆಯೇ ಮುಗಿದಿದ್ದವು, ಲೇಟಾಗಿ ಹೋದದ್ದರಿಂದ ಆರಾಮಾಗಿ ನೋಡಿಕೊಂಡು ಬರಲಾಯ್ತು.ಬೆಳಗಿನ ಕಾರ್ಯಕ್ರಮದ ಕೆಲ ಪೋಟೋಗಳನ್ನ ನೋಡಲಿಕ್ಕೆ ಸಿಕ್ತು.


ಅವರು ಕಾಲೇಜಿನ ಸಮಯದಿಂದ ಈಗಿನವರೆಗೆ ರಚಿಸಿದ ಚೆಂದದ ವ್ಯಂಗ್ಯ ಚಿತ್ರಗಳು ಇಲ್ಲಿವೆ  
 

 

ಹಾಗೇ ಅಚಾನಕ್ಕಾಗಿ ಮತ್ತೊಂದು ಫೋಟೋದಲ್ಲಿದವರೊಬ್ಬರನ್ನ ಗುರುತಿಸಿದಾಗ ಸಖತ್ ಷಾಕ್!! ಜೊತೆಗೆ ಸಖತ್ ಸಂತಸವಾಯ್ತು!! :)ಸಂಜೆ ಮನೆಗೆ ವಾಪಸ್ ಬರುವಾಗ ಕ್ಲಿಕ್ಕಿಸಿದೊಂದು ಚಿತ್ರ :)ನನಗೆ ಈವತ್ತು ಒಂಥರಾ ಕಂಪ್ಲೀಟ್ "ಕಲಾ ದಿನ" ವಾಗಿತ್ತು. :)
ನಿಮ್ಮ ದಿನ ಹೇಗಿತ್ತು?! ತಿಳಿಸಿ :)

ಧನ್ಯವಾದಗಳು
ಸವಿತ :)

Saturday, December 12, 2009

ರೈಲು ಪ್ರಯಾಣ ಬರೀ 5,000 ಕಿ.ಮೀ....!!

ಮೊನ್ನೆ ನನ್ನ ದೊಡ್ಡಮ್ಮನ ಊರಿಗೆ ಹೋಗೋ ತಯಾರಿಯಲ್ಲಿದ್ದೆ..ಯಾವಾಗಲು ಬಸ್ಸಿನಲ್ಲೇ ಹೋಗೋ ನಾನು ಈ ಸಲ ರೈಲಿನಲ್ಲಿ ಹೋಗೋದು ಅಂತ ಡಿಸೈಡ್ ಮಾಡ್ದೆ..ಇಂತಾ ಚಿಕ್ಕ ವಿಚಾರದಲ್ಲಿ ಡಿಸೈಡ್ ಮಾಡೋದೇನಿದೆ ಅಂತೀರಾ!! ಇದೆ ಇಲ್ದೆ ಏನು?!!ಹಾಗೆ ವಿಚಾರ ಮಾಡಿದಾಗ... ನನಗೆ ನೆನಪಿರೋವಾಗಿಂದ ಈಗಿನವರೆಗೂ ಎಷ್ಟು ಪ್ರಯಾಣ ಮಾಡಿದ್ದೇನೆ ಅಂತ ಒಂದು ಅಂದಾಜು ಲೆಕ್ಕ ಹಾಕಿದೆ. ಅದರಲ್ಲಿ ಬಸ್ಸು, ವಿಮಾನ, ರೈಲಿನ ಅಂಕಿ ಅಂಶಗಳನ್ನ ಪಟ್ಟಿ ಮಾಡಿ ನೋಡಿದಾಗ...ನನಗೇ ಅಚ್ಚರಿಯೆನಿಸ್ತು..!!!

ಬಸ್ಸು - ಸುಮಾರು 80,000 ಕಿ.ಮೀ.ಗಳು,
ವಿಮಾನ - ಸುಮಾರು ಬಸ್ಸಿನ ಅರ್ದದಷ್ಟು ಕಿ.ಮೀ.ಗಳು
ರೈಲು - ಬರೀ 5,000 ಕಿ.ಮೀ.ಗಳಷ್ಟು!!?? ಅದರಲ್ಲೂ ನಮ್ಮದೇಶದಲ್ಲಿ ಒಂದು 3,000 ಕಿ.ಮೀಗಳಿರಬಹುದೇನೊ ಅಷ್ಟೆ...
ಬರೀ 3,000 ಕಿ.ಮೀ!!! ಅದ್ಯಾಕೋ ನನಗೆ ಒಂಥರಾ ಗಿಲ್ಟಿ ಫೀಲಾಯ್ತು...:( ಜೊತೆಗೆ ನಮ್ಮಮ್ಮ.."ಬಸ್ಸಿನಲ್ಲಿ ಬಹಳ ಓಡಾಡೋದು ಒಳ್ಳೇದಲ್ಲ"..ಸ್ವಿಚ್ ಓವರ್ ಟು ರೈಲು ಅಂತ :)

ಸರಿ ಇವೆಲ್ಲಾ ವಿಚಾರಗಳನ್ನ ನೆನಪಿನಲ್ಲಿಟ್ಟುಕೊಂಡು ಬೆಳಗ್ಗೆನೆ ಮೆಜಸ್ಟಿಕ್ ರೈಲ್ವೆ ಸ್ಟೇಷನ್ ಟಿಕೆಟ್ ಕೌಂಟರ್ನಲ್ಲಿ ಟಿಕೆಟ್ ತಗೊಂಡು..8 ಗಂಟೆಯ ಹುಬ್ಬಳ್ಳಿ ಪ್ಯಾಸೆಂಜರ್ ಟ್ರೈನ್ ಎಷ್ಟನೇ ಫ್ಲಾಟ್ ಫಾರಂ? ಅಂದಾಗ
...ಬಲಗಡೆ ಕೆಳಗೆ subway ಯಿಂದ ಹೋಗಿ ಅಂತ ಕೌಂಟರಿನೊಳಗಿಂದ ಹೆಣ್ಣುಮಗಳ ಉತ್ತರ ಬಂತು.
ಅಬ್ಬ ಅದೇನು subway ಅಂತೀರಾ!! : ( ವರ್ಣಿಸೋಕಾಗೋಲ್ಲ.!!

ಆಗ್ಲೇ ಒಂದು ರೈಲು ಬಂದು ನಿಂತಿತ್ತು..ಟೀ ಅಂಗಡಿಯವಂಗೆ ಕೇಳಿ ಕನ್ಫರ್ಮ್ ಮಾಡಿಕೊಂಡೆ. ಅಲ್ಲಿದ್ದ ಪ್ರಯಾಣಿಕರೆಲ್ಲಾ ರೈಲ್ವೆ ಬೋಗಿಯ ಬಾಗಿಲ ಬಳಿ ಮುಗಿಬಿದ್ದಿದ್ದರು...ಆದ್ರೆ ಬಾಗಿಲು ಇನ್ನು ತೆಗೆದಿರಲ್ಲಿಲ್ಲ!! ಅದ್ಯಾರೋ ಆಸಾಮಿ ತುರ್ತು ನಿಗಮದ ಕಿಟಕಿ ತೆರೆದು ಒಳಗೆ ತೂರಿ ಬಾಗಿಲು ತೆಗೆದೇ ಬಿಟ್ಟ...ನಾನು ಟೈಮ್ ಮತ್ತು ಜನರ ಗುಂಪನ್ನ ಒಮ್ಮೆ ನೋಡಿದೆ...ಇನ್ನು 7.35 ಆರಾಮಾಗಿ ಕುಳಿತರೂ ಅರ್ಧ ಕಂಪಾರ್ಟ್ಮಮೆಂಟ್ ತುಂಬೊವಷ್ಟು ಜನ...ಆಗ್ಲೇ ಜನರು ಕಿಟಕಿ ಬಳಿ ಹೋಗಿ ಟವೆಲ್/ಕರ್ಚಿಪ್ ಹಾಕ್ತಿದ್ರು.. ಜನ ಮರುಳೋ ಜಾತ್ರೆ ಮರುಳೋ ಗೊತ್ತಾಗ್ಲಿಲ್ಲ :D ನಾನು ಕಿಟಕಿ ಹತ್ತಿರದ ಒಂದು ಸೀಟಲ್ಲಿ ಕುಳಿತೆ...ಮೂರ್ನೆ ಬಾರಿಯ ಪ್ಯಾಸೆಂಜರ್ ಟ್ರೈನ್ ಅನುಭವ...ಬಹಳ ಹುಮ್ಮಸ್ಸಿತ್ತು..ಜನ ಬರ್ತಾ ಇದ್ರೂ ಹೋಗ್ತಾ ಇದ್ರೂ...8 ಗಂಟೆಗೆ ರೈಲು ಹೊರಟಿತು...

ಊರು ಬಿಟ್ಟಂತೆಲ್ಲಾ...ಕಿಟಕಿ ಹೊರಗೆ ಹಸಿರು ಹೊಲ ಗದ್ದೆ ತೋಟಗಳು ಶುರುವಾಯ್ತು...ಒಳಗೆ ಜಾಹೀರಾತುಗಳು!!
ಹೌದು...ಜಾಹೀರಾತುಗಳು ಟೀವೀಲಲ್ಲ...ಕಂಪಾರ್ಟ್ಮಮೆಂಟ್ ಒಳಗೆ!! :)
ಮೊದಲು ನ್ಯೂಸ್ ಪೇಪರ್ನವ,
ನಂತರ ಮಲ್ಲಿಗೆ ಇಡ್ಲಿಯವ,
ಕಾಫಿ ಟೀಯವ,
ಬಂಗಾರದ ಬಣ್ಣದ ಸರ ಮಾರುವವ,
ಟಾರ್ಚ್ ಇರೋ ಕೀಚೈನ್ ಮಾರುವವ,
ಹತ್ತಕ್ಕೆ ಮೂರು ಪೆನ್ನು ಮಾರುವವ,
ಬಿಡಿ ಮಲ್ಲಿಗೆ, ಕನಕಾಂಬರ ಮಾರೋ ಹೂವಾಡಗಿತ್ತಿ,
ಬಾಟಲಿ ನೀರಿನವ,
ಕತ್ತರಿಸಿದ ಸೌತೆ ಕಾಯಿ ಮಾರುವವ,
ಕಂಕುಳಲ್ಲಿ ಕೂಸನ್ನಿಟ್ಟ್ಕೊಂಡು "ನಮ್ಮ ಮನೆಯಲಿ ದಿನವೂ ದಿನವೂ ಚೈತ್ರವೇ" ಹಾಡೇಳಿದ ಹೆಣ್ಮಗಳು,
ಬಾದಾಮಿ ಹಾಲಿನವ,
ದೋಸೆ ಚಿತ್ರಾನ್ನದವ,
ಬಿಸ್ಕತ್ತು,ಪೆಪ್ಸಿಯವ,
ರೈಲಿನ ನೆಲ ಒರೆಸಿ ಚಿಲ್ಲರೆ ಕೇಳೋ ಚಿಕ್ಕ ಹುಡುಗ,
ಬಿಸಿ ಬಿಸಿ ಕಡಲೆ ಪೂರಿಯವ,
ಲೇಸ್,ಕುರ್ಕುರೆಯವ,
ಹುರಿದ/ಬೇಯಿಸಿದ ಸೇಂಗಾ ಮಾರೋ ಅಜ್ಜಿ,
ಕಣ್ಣು ಕಾಣಿಸದವ..
ಟಿಕೆಟ್ ಚೆಕ್ ಮಾಡುವವ,
...........................................
ಹೀಗೆ ನೆನಪಿಡಲಾರದಷ್ಟು ಜನಗಳು...ಜಾಹೀರಾತುಗಳು,ವ್ಯಾಪಾರಗಳು,ದಾನ ಧರ್ಮಗಳು....!!!
ನನಗಂತೂ ನೋಡಿ ನೋಡಿ ಕಣ್ಣುಗಳು ಭಾರವೆನಿಸತೊಡಗಿದವು..ನಿದ್ದೆಗೆ ಜಾರೋ ಮುನ್ನ ಒಂದಷ್ಟು ಫೋಟೋ ಕ್ಲಿಕ್ಕಿಸಿದ್ದಾಯ್ತು.

ಕೊನೆಗೆ ನಮ್ಮ ಟ್ರೈನ್ ನಿಂತಾಗ ಪಕ್ಕದಲ್ಲೇ ಮತ್ತೊಂದು ಟ್ರೈನ್ ಹೋಯಿತು... ಆ ಕ್ಷಣ ಭೌತ ಶಾಸ್ತ್ರದ ಚಲನೆಯ ನಿಯಮಗಳ ನೆನಪಾಯ್ತು...!ಓಡುತ್ತಿದ್ದ ಆ ರೈಲಿನ ಕಿಟಕಿ ಬಳಿ ಕುಳಿತ ಜನರು..ಅವರ ಹಾವ ಭಾವಗಳು...ಸರ್ರನೆ ಸಿನೆಮಾ ರೀಲೊಂದನ್ನ ಓಡಿಸಿ ತೋರಿಸಿದಂತಿತ್ತು :)

ಯಾಕೋ ನನ್ನ ರೈಲು ಪ್ರಯಾಣದ ಅಂಕಿ ಅಂಶಗಳು ಹೆಚ್ಚಾಗೋದು ಕಷ್ಟವೆನಿಸುತ್ತಿದೆ...!! :(
 ಅದಿರ್ಲಿ ನಿಮ್ಮ ಪ್ರಯಾಣದ ಅಂಕಿ ಅಂಶಗಳನ್ನ ಲೆಕ್ಕ ಹಾಕಿದ್ದೀರಾ?!! :)
-ಸವಿತ

Sunday, November 29, 2009

ನೀರವತೆ!
 ಇದೇನು ಕಕ್ಕುಲತೆಯೋ ಕಾಣೆ!!
ಇರೆಂದೊಡನಿರದೆ...
ಬಿಡದೆ ತಿರು ತಿರುಗಿ ಬಂದು
ಮನಸಿನುಲ್ಲಾಸಗಳ
ಹುಚ್ಚೆದ್ದು ಕುಣಿಸಿ
ರಮಿಸಿ ವಿರಮಿಸಿ
ಶಾಂತವೆನುತಿರುವಾಗ
ಮತ್ತದೇ ನೀರವತೆ!

ಮನದ ದುಗುಡವನೆಲ್ಲ
ಕಿತ್ತೊಗೆದು
ಅಣಿಯಾದಂತೆಲ್ಲ...
ತಿರುತಿರುಗಿ ಕಾಡುವಾ...
ನೀರವತೆ!

-ಸವಿತ

Thursday, November 26, 2009

ಸಿಕ್ಸ್ತ್ ಸೆನ್ಸ್ ಮಿಸ್ಟ್ರಿ ಮ್ಯಾನ್ - ಪ್ರಣವ್ ಮಿಸ್ಟ್ರಿ

ನಾವು ಜೀವಿಸುತ್ತಿರೋ ನೈಜ ಜಗತ್ತು ಮತ್ತು ಕಂಪ್ಯೂಟರಿನ ಒಳ ಜಗತ್ತು ಭೌತಿಕ ನೆಲೆಯಲ್ಲಿ ಬೇರೆ ಬೇರೆಯೇ ಸರಿ.

ಏ ಬಾ.. ಇಲ್ಲಿ ಎಂದು ಕೈ ಸನ್ನೆ ಮಾಡಿ ಕೂಗಿದರೆ.. ಎದುರಿಗಿದ್ದವರು ನಮ್ಮ ಬಳಿ ಬರೋ ರೀತಿಯಲ್ಲಿ....ಕೀಲಿಮಣೆ ಬಳಸದೇ ಬರೀ ಅಂಗಸನ್ನೆಗಳ ಮೂಲಕ ಕಂಪ್ಯೂಟರ್ಗೆ ಸನ್ನೆ ಮಾಡಿ ಏನಾದ್ರು ಹೇಳಿದ್ರೆ ಊಹಿಸಿಕೊಳ್ಳಿ!! ಅದು ಅರ್ಥಮಾಡಿಕೊಳ್ಳುತ್ತಾ?? ಇಲ್ವಾ!!
ಇದೆಂತಹ ಸಿಲ್ಲಿ ಪ್ರಶ್ನೆ ಅಂತೀರಾ?!!ಮುಂದೆ ಓದಿ..

ನೀವು ಕಾಗದದ ಮೇಲೆ ಬರೆದಂತೆಲ್ಲಾ..ಆ ಸಾಲುಗಳು ನೇರವಾಗಿ ನಿಮ್ಮ ಮೊಬೈಲ್ನಲ್ಲಿ ಮೆಸೇಜಾಗಿ ಬಂದರೆ!

ಹಾಗೇ ಚಿಕ್ಕಂದಿನಲ್ಲಿ ನಮ್ಮ ಪುಟಾಣಿ ಕೈಗಳನ್ನ ಕಣ್ ಸುತ್ತ ಹಿಡಿದು ಕಂಡ ಅಚ್ಚರಿಯ ದೃಶ್ಯಗಳನ್ನ ಸೆರೆ ಹಿಡಿದು "ಕ್ಲಿಕ್" ಎಂದು ಬಾಯಲ್ಲಿ ಹೇಳಿ ಅದನ್ನ ಮನಸ್ಸಿನ ಮೂಲೆಯಲ್ಲಿ ಸೇವ್ ಮಾಡುವ ರೀತಿ, ಈಗಲೂ ಕೂಡ ಖಾಲಿ ಕೈಗಳಲ್ಲಿ ಕ್ಲಿಕ್ ಮಾಡಿದಾಗ ನಿಜವಾದ ಡಿಜಿಟಲ್ ಫೊಟೊ ಬಂದರೆ ಹೇಗಿರತ್ತೆ?!!

ಹುಡುಕು ಪದ ಟೈಪಿಸದೆ! ಗೂಗಲ್ ಮ್ಯಾಪ್ನಲ್ಲಿ ನಮಗೆ ಬೇಕಾದ ವಿಚಾರವನ್ನ ಹುಡುಕುವಂತಿದ್ದರೆ.. ಉದಾ: ಮ್ಯಾಪ್ ಮೇಲೆ ಕಾಫಿ ಕಪ್ ಇಟ್ಟರೆ ಕಾಫಿ ಶಾಪ್ ಎಲ್ಲಿವೆ, ಎಟಿಎಂ ಕಾರ್ಡ್ ಇಟ್ಟರೆ ಎಟಿಎಂ ಸೆಂಟರ್ ಎಲ್ಲಿವೆ ಎಂದು ತೋರಿಸುವಂತಿದ್ದರೆ!!

ಕಾಗದದ ನ್ಯೂಸ್ ಪೇಪರಿನಲ್ಲಿ ಲೈವ್ ನ್ಯೂಸ್ ವೀಡಿಯೋ ನೋಡುವಂತಿದ್ದರೆ!!

ಕೈಲಿ ಹಿಡಿದ ಬಿಳಿ ಕಾಗದದಲ್ಲಿ ಸಿನೆಮಾ ನೋಡುವಂತಿದ್ದರೆ,ಕಾರ್ ರೇಸಿಂಗ್ ಗೇಮ್ ಆಡುವಂತಿದ್ದರೆ!!
.
.
ಇವೆಲ್ಲಾ ಬರೀ ಸಿನೆಮಾಗಳಲ್ಲಿ ನೋಡಬಹುದು ಅಂತೀರಾ? ಇಲ್ಲ ಈಗ ಇವೆಲ್ಲ ನಿಜವಾಗುವ ದಿನಗಳು ದೂರಿಲ್ಲ...
ಹೀಗೇ ಕೀಲಿಮಣೆಯಿಲ್ಲದೆಯೆ...ಕಂಪ್ಯೂಟಿಂಗ್ ಡಿವೈಸ್ ಸಹಾಯದಿಂದ...ಬರೀ ಕೈಬೆರಳುಗಳ ಮೂಲಕ ನಾವು ಡಿಜಿಟಲ್ ಪ್ರಪಂಚದ ಒಳ ಹೋಗುವುದಕ್ಕೆ ಅವೆಷ್ಟೊಂದು ರೀತಿಯ ಸಾಧನಗಳನ್ನ... ಕಳೆದ 8 ವರ್ಷಗಳ ತಮ್ಮ ಸಂಶೋಧನೆಗಳಿಂದ ಸಾಕಾರ ಮಾಡಿ "ಸಿಕ್ಸ್ತ್ ಸೆನ್ಸ್ ಡಿವೈಸ್" ತಯ್ಯಾರು ಮಾಡಿರುವ ಮಿಸ್ಟ್ರಿ ಮ್ಯಾನ್ - ಪ್ರಣವ್ ಮಿಸ್ಟ್ರಿ.

ಈ ನವೆಂಬರ್ ಶುರುವಿನಲ್ಲಿ ಮೈಸೂರಿನಲ್ಲಿ ನಡೆದ ಇಂಡಿಯಾ TED ಸಮ್ಮೇಳನದಲ್ಲಿ ಪ್ರಣವ್ ಮಿಸ್ಟ್ರಿ ಕೊಟ್ಟ ಟಾಕಿನ ವೀಡಿಯೋ ಇಲ್ಲಿದೆ ನೋಡಿ. ಸಕತ್ ಕುತೂಹಲಕಾರಿಯಾಗಿದೆ!! :)

MIT Media Labನಲ್ಲಿ PhD ಮಾಡುತ್ತಿರುವ ಪ್ರಣವ್ ಮಿಸ್ಟ್ರಿ ಗುಜರಾತಿನ ’ಪಾಲನ್ಪುರ್’ನವರು. ಹಾಗೇ ಇಷ್ಟೊಂದು ಅಚ್ಚರಿ ಮೂಡಿಸಿರುವ ಈ "ಸಿಕ್ಸ್ತ್ ಸೆನ್ಸ್ ಡಿವೈಸ್ನ" ಹಿಂದಿರುವ ತಂತ್ರಾಂಶವನ್ನ ಓಪನ್ ಸೋರ್ಸ್ ಮಾಡುವರೆಂದು ಕೂಡ ಹೇಳಿದ್ದಾರೆ!!! :)

TED-Ideas Worth Spreading ಬಗ್ಗೆ ಹೆಚ್ಚಿನ ವಿವರಗಳಿಗೆ ಇಲ್ಲಿ ನೋಡಿ.

ಧನ್ಯವಾದಗಳು
-ಸವಿತ

Monday, November 16, 2009

ಫ್ಲೈಯಿಂಗ್ ಸಾಸರ್ಯು.ಎಫ್.ಓ ಅಂದ್ರೆ unidentified flying object, ಅಪರಿಚಿತ ಹಾರಾಡುವ ವಸ್ತುಗಳು.. ಈ ಯು.ಎಫ್.ಓಗಳು ಆಕಾಶದಲ್ಲಿ ಟೀ ಸಾಸರುಗಳನ್ನ ಒಂದರ ಮೇಲೆ ಒಂದರಂತೆ ಬೋರಲಾಗಿ ಇಟ್ಟಂತೆ ಕಂಡದ್ರಿಂದ ಇವುಗಳಿಗೆ ಫ್ಲೈಯಿಂಗ್ ಸಾಸರ್ ಅಂತ ಕರೆದರು.

ತಟ್ಟೆಯಂತಿರುವ! ಸ್ವಯಂ ಬೆಳಕಿನಿಂದ ಕೂಡಿರುವ! ಅಪರಿಮಿತ ವೇಗದಲ್ಲಿ ಫೈಟರ್ ವಿಮಾನಗಳ ಕಣ್ಣಿಗೇ ಕಾಣದಂತೆ ಮಾಯವಾಗುವ ರೆಕ್ಕೆಗಳೇ ಇಲ್ಲದ ಹಾರುವ ಯಂತ್ರಗಳು!!ಯಾವುದೇ ಯಂತ್ರದ ಶಬ್ಧವೂ ಇಲ್ದೆ ನೆಲದಿಂದ ನೇರವಾಗಿ ಮೇಲಕ್ಕೇರುವ, ಹೊಗೆಯನ್ನೂ ಉಗುಳದೆ ಯಾವುದೇ ರೆಕ್ಕೆಗಳೇ ಇಲ್ಲದೆ ನಿಶ್ಯಭ್ದವಾಗಿ ಆಕಾಶದಲ್ಲಿ ಚಲಿಸುವ, ಅಲ್ಲೇ ನಿಶ್ಚಲವಾಗಿ ನಿಲ್ಲುವ ಮತ್ತು ನಿಂತಲ್ಲೇ ಗಂಟೆಗೆ ಎಂಟರಿಂದ…ಇಪ್ಪತ್ತು ಸಾವಿರ ಮೈಲುಗಳ ವೇಗದಲ್ಲಿ ಇದ್ದಕ್ಕಿದ್ದಂತೆ ಚಲಿಸುವ ಮತ್ತು ಅದೇ ವೇಗದಲ್ಲಿ ಎಡಕ್ಕೆ ಬಲಕ್ಕೆ ಹಿಂದಕ್ಕೆ ಮುಂದಕ್ಕೆ ಹಠಾತ್ತಾಗಿ ದಿಕ್ಕು ಬದಲಿಸುವ ಈ ಯು.ಎಫ್.ಓಗಳು ನಮ್ಮ ಪುರಾಣಗಳ ಮಂತ್ರಚಾಲಿತ ವಿಮಾನಗಳ ಕಲ್ಪನೆಗಳನ್ನೂ ಮೀರಿಸುವಂತಿವೆ!!

ಈ ಊಹಾತೀತ & ನಮ್ಮ ಭೌತ ನಿಯಮಗಳನ್ನೆಲ್ಲಾ ಮೀರಿದ ಈ ಫ್ಲೈಯಿಂಗ್ ಸಾಸರ್ಗಳು ನಿಜವಾದವೆ? ಅಥವಾ ಬರೀ ನಮ್ಮ ಕಲ್ಪನೆಯೇ?!

ತೇಜಸ್ವಿಯವರೇ ಹೇಳಿರೋ ಹಾಗೆ...ಯು.ಎಫ್.ಓಗಳ ಬಗ್ಗೆ ಓದುವಾಗ ಯು.ಎಫ್.ಓ ಇರುವಿಕೆಯನ್ನ ನಂಬಬೇಕೆ ಬೇಡವೇ ಎನ್ನುವ ಗೋಜಿಗೆ ಹೋಗದೆ ಸುಮ್ಮನೆ ಓದುತ್ತಾ ಹೋಗೋದು ಅವಶ್ಯಕ ಯಾಕಂದ್ರೆ ಯು.ಎಫ್.ಓ ಇರುವಿಕೆಯನ್ನ ನಂಬುವ ಇಲ್ಲ ನಂಬದಿರುವ ಕ್ರಿಯೆಯಲ್ಲಿಯೇ ನಮ್ಮ ಬುಧ್ಧಿಶಕ್ತಿಗೆ ಹೊಸ ಪ್ರಶ್ನೆಗಳು ಆಯಾಮಗಳು ಸಿಗುತ್ತವೆ. ನಂಬಿದ್ರೆ ಸಕತ್ ವಿಚಿತ್ರ ಸಂಗತಿಗಳು!! ನಂಬದಿದ್ದರೆ ನೂರೊಂದು ಪ್ರಶ್ನೆಗಳು!! :)

ಈ ಸಾಸರುಗಳೆಲ್ಲ ಒಂದು ದೊಡ್ಡ ಮಾತೃ ವಿಮಾನದಿಂದ ಬಂದು ಭೂಮಿಯ ವೀಕ್ಷಣೆ ನಡೆಸಿ ಪುನಃ ಹೋಗಿ ಮಾತೃ ವಿಮಾನವನ್ನ ಸೇರಿಕೊಳ್ಳುತ್ತವೆ. ಸಾಸರುಗಳ ಪ್ರಚಂಡ ವೇಗವನ್ನ ಗಮನಿಸಿದರೆ(ಗಂಟೆಗೆ ಎಂಟರಿಂದ ಇಪ್ಪತ್ತು ಸಾವಿರ ಮೈಲುಗಳ ವೇಗ!!!) ಅವು ಭೂಮಿಯ ಯಾವ ಭಾಗಕ್ಕೆ ಬೇಕಾದರೂ ಕ್ಷಣಾರ್ಧದಲ್ಲಿ ಹೋಗಿ ವೀಕ್ಷಣೆ ನಡೆಸಿ ಬರಬಹುದು.ಅವು ಒಮ್ಮೊಮ್ಮೆ ಏಕಾಂಗಿಯಾಗಿ, ಒಮ್ಮೊಮ್ಮೆ ಹಲವಾರು ಆಕಾಶದಲ್ಲಿ ಹಾರಾಡುತ್ತಾ ವೀಕ್ಷಣೆ ನಡೆಸಿವೆ. ಕೆಲವು ವೇಳೆ ಯುದ್ಧ ವಿಮಾನಗಳಂತೆ ವ್ಯೂಹ ರಚಿಸಿಕೊಂಡು ಅಪರಿಮಿತ ವೇಗದಲ್ಲಿ ಹೋಗೊದನ್ನ ಹಲವಾರು ಜನ ನೋಡಿದ್ದಾರಂತೆ.೧೯೫೦ರ ಆಸುಪಾಸಿನನಲ್ಲಿ ಸಾಸರ್ಗಳ ಹಾರಾಟ ಏಕೆ ಜಾಸ್ತಿಯಾಗ್ತಿದೆ ಅಂತ ಯಾರಿಗೂ ಗೊತ್ತಿಲ್ಲದಿದ್ದರೂ..ಅವು ಭೂಮಿಯ ಮೇಲೆ ಧಾಳಿ ಮಾಡಲು ಅಂತಿಮ ವೀಕ್ಷಣೆ ನಡೆಸುತ್ತಿದ್ದಂತೆ ತೋರುತ್ತಿದ್ವಂತೆ!!

ಹಲವಾರು ಸಲ ಈ ಹಾರುವ ಸಾಸರುಗಳನ್ನ ಜೆಟ್ ವಿಮಾನಗಳು ಬೆನ್ನತ್ತಿದಾಗ ಅವು ಮಿಂಚಿ ಮಾಯವಾಗಿವೆಯೇ ಹೊರತು ವಿಮಾನಗಳ ಮೇಲೆ ಎರಗುವುದಾಗಲಿ ದಾಳಿ ಮಾಡುವುದಾಗಲಿ ಮಾಡಿ ಆಕ್ರಮಣಶೀಲ ಪ್ರವೃತ್ತಿಯನ್ನ ತೋರಿಸಿಲ್ಲ....ಬ್ಲೂ ಬುಕ್ನ "ಮೆಂಟಲ್ ದುರಂತ”ದ ಹೊರತಾಗಿ. ಈ ದುರಂತಕ್ಕೆ ನಿಜವಾಗ್ಲೂ ಸಾಸರುಗಳೇ ಕಾರಣವೇ?!
ಈ ಆಕಾಶಯಂತ್ರಗಳ ಮೂಲ ಎಲ್ಲಿಯದು? ಇವುಗಳ ಚಲನವಲನಗಳು ಬುದ್ಧಿ ಅಥವಾ ಪ್ರಜ್ಞೆಯಿಂದ ನಿಯಂತ್ರಿತವಾದವೆ? ಅದನ್ನು ಯಾವ ಪ್ರಜ್ಞೆ ಹೇಗೆ ನಿಯಂತ್ರಿಸುತ್ತಿದೆ. ಅದು ಸಾಸರಿನೊಳಗೆ ಇದೆಯೋ ಅಥವಾ ಅವುಗಳನ್ನ ಇಲ್ಲಿಗೆ ತಂದು ಬಿಡುವ ಮಾತೃ ನೌಕೆಯೊಂದರಲ್ಲಿದೆಯೋ ಅಥವಾ ಲಕ್ಷಾಂತರ ಮೈಲುಗಳಾಚೆಯ ನಕ್ಷತ್ರ ಮಂಡಲದಲ್ಲಿದೆಯೋ?! ಇನ್ನೂ ಗೊತ್ತಾಗಿಲ್ಲ...

ಇಲ್ಲಿಯವರೆಗೂ ಫ್ಲೈಯಿಂಗ್ ಸಾಸರ್ಗಳೊಡನಾದ ಅನುಭವಗಳನ್ನ ಈ ಮೂರು ರೀತಿ ವಿಭಾಗಿಸಿದ್ದಾರೆ.
ಹಾರುವ ಸಾಸರುಗಳನ್ನ ಮನುಷರು ಹತ್ತಿರದಿಂದ ನೋಡಿದ್ದು ,ಅದರ ವಿವರಗಳು, ಅದಕ್ಕೆ ಮುಖಾಮುಖಿಯಾದಾಗ ಅದರ ವೇಗದ ಪರಿಣಾಮಗಳು, ಹೊಮ್ಮಿದ ಬೆಳಕಿನ ಸ್ವರೂಪ ಇತ್ಯಾದಿಗಳನ್ನ ಗಮನಿಸಿ ಹೇಳಿದ ಘಟನೆಗಳಿಗೆ "ಮೊದಲ ವರ್ಗದ ಮುಖಾಮುಖಿ" (Close encounter of the first kind) ಅಂತಾರೆ.

ಹಾರುವ ತಟ್ಟೆಗಳು ಭೂಮಿಗಿಳಿದ ಸಂಗತಿಗಳು, ಅವು ಭೂಮಿಯ ಮೇಲೆ ನಿಂತಾಗ ಮತ್ತು ಅಲ್ಲಿಂದ ಹಾರಿದಾಗ ಭೂಮಿಯ ಮೇಲೆ ಉಳಿದುಕೊಂಡ ಗುರುತುಗಳು ಅಥವಾ ಪರಿಣಾಮಗಳು ಇವು ಇರುವ ಘಟನೆಗಳನ್ನ ಎರಡನೇ ವರ್ಗದ ಹತ್ತಿರದ ಮುಖಾಮುಖಿ" (Close encounter of the second kind) ಅಂತಾರೆ.

ಭೂಮಿಗಿಳಿದ ಸಾಸರುಗಳಿಂದ ಮಾನವರನ್ನು ಹೋಲುವ ಜೀವಿಗಳು, ಯಂತ್ರ ಮಾನವರು ಅಥವಾ ಮನುಷ್ಯರೇ ಬಂದಿದ್ದು ಭೂಮಿಯ ಮನುಷ್ಯರೊಡನೆ ಮುಖಾಮುಖಿಯಾದುದು ಸಂವಾದಿಸಲು ಯತ್ನಿಸಿದ್ದು ಮುಂತಾದವುಗಳಿಗೆ ಮೂರನೇ ರೀತಿಯ ಮುಖಾಮುಖಿ(Close encounter of the third kind) ಅಂತಾರೆ.

ಎರಡನೇ ರೀತಿಯ ಮುಖಾಮುಖಿಗಿಂತಲೂ ಭಯ ಕಾತರ ಕುತೂಹಲ ಸಂದೇಹಗಳನ್ನ ಹುಟ್ಟಿಸುವುದು ಮೂರನೇ ರೀತಿಯ ಮುಖಾಮುಖಿ. ಅಲ್ಲಗಳೆಯಲಸಾದ್ಯವಾದಂತ ಸಾಕ್ಷಾಧಾರಗಳೊಂದಿಗೆ ನಿರೂಪಿತವಾಗಿರುವ ಈ ಕೆಲವು ಘಟನೆಗಳು ನಮ್ಮ ವಿಚಾರಶೀಲತೆಗೂ ವಿವೇಕಕ್ಕೂ ಸವಾಲುಗಳಾಗಿವೆ....
- ಇಟಲಿಯ ರಾವಿಯೋ ಹಳ್ಳಿಗೆ ಹೋದ ಸಂಶೋಧಕನಿಗೆ ಹಠಾತ್ತಾಗಿ ಇದಿರಾದ ಆಕಾಶಲೋಕದ ಕುಬ್ಜದಿಂದ ಆದ ಆಘಾತ!
- ದನ ಕಾಯುವ ಹುಡುಗ ಮೂಕನಂತಿದ್ದ ಮ್ಯಾಕ್ಸಿಮೊವನ್ನ ನೋಡಿ ತಾತ್ಸಾರದಿಂದ ಲೋಚಗುಟ್ಟಿದ ಆಕಾಶಕುಳ್ಳರು!
- ಅಮೆರಿಕಾದ ಹಾಪ್ಕಿನ್ಸ್ ವಿಲ್ಲಾದ ಎಂಟು ಜನರಿಗೆ ಸಾಸರಿನಿಂದ ಇಳಿದ ವಿಚಿತ್ರ ಜೀವಿಗಳು ಕಾಟ ಕೊಟ್ಟಿದ್ದು..
- ಬ್ರೆಜಿಲ್ನ ಹಳ್ಳಿರೈತ ಆಂಟೋನಿಯೋ ವಿಲ್ಲಾಸ್ ಬೋಸ್ ಆಕಾಶಲೋಕದ ಪ್ರೇಯಸಿಯೊಂದಿಗಿನ ಪ್ರಣಯ
- ಕೆನಡಾದ ಬೆಟ್ಟಿ ಮತ್ತು ಬೇರ್ನೆ ದಂಪತಿಗಳ ಜೀವನದಲ್ಲಿ ವಸ್ತುಗಳು ಕಳೆದು ಹೋದ ಹಾಗೆ... ಕೆಲವು ಘಂಟೆಗಳು ಕಳೆದು ಹೋಗಿದ್ದು ಹೇಗೆ? ಆ ಕಳೆದು ಹೋದ ಕಾಲದಲ್ಲಿ ಏನೇನು ರಹಸ್ಯಗಳಿದ್ದವು? ಅದನ್ನ ಪತ್ತೆ ಹಚ್ಚಿದ್ದು ಹೇಗೆ?
- ಇದಲ್ಲದೆ ಆಡಂ ಸ್ಕೀ ಆಕಾಶ ಯಾತ್ರಿಕರನ್ನು ಸಂಧಿಸಿ ಮಾತಾಡಲು ಯತ್ನಿಸಿದ ವೃತ್ತಾಂತ!
----------------------

ಪೂರ್ಣ ಚಂದ್ರ ತೇಜಸ್ವಿಯವರ ಫ್ಲೈಯಿಂಗ್ ಸಾಸರ್ಗಳ ಬಗೆಗಿನ ಎರಡು ಪುಸ್ತಕಗಳನ್ನ ಓದಿದ ಮೇಲೆ ಕತ್ತೆತ್ತಿ ಆಕಾಶ ವೀಕ್ಷಿಸಲು, ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳ ಬಗ್ಗೆ ತಿಳಿಯಲು ಕುತೂಹಲವಾಗಿದೆ...ದೂರ ಗ್ರಹಗಳ ಜೀವಿಗಳು ಭೂಮಿಗೆ ಬಂದಿಳಿಯಬಹುದೆಂಬ ಕಲ್ಪನೆಯೇ ವಿಸ್ಮಯ!!ಫ್ಲೈಯಿಂಗ್ ಸಾಸರ್ಗಳ ವಿಷಯವಾಗಿ ಎಷ್ಟೋ ಜನರ ಅನುಭವಗಳಿವೆ, ಪುಸ್ತಕಗಳಿವೆ, ಎಪ್ಪತ್ತಕ್ಕೂ ಹೆಚ್ಚಿನ ಸಿನೆಮಾಗಳಿವೆ!!

ತೇಜಸ್ವಿಯವರ "ಫ್ಲೈಯಿಂಗ್ ಸಾಸರ್" ಪುಸ್ತಕ ಮರೆಯಲಾರದಂತಹ ಒಂದು ಅನುಭವ.
ಅದು ನನಗೂ ದಕ್ಕಿದೆ. ನಿಮಗೂ ದಕ್ಕಲಿ ಎಂದು ಹಾರೈಸುವೆ. :)
ಆಕಾಶದಾಚೆಗಿನ ಅತಿಥಿಗಳ ಬರುವಿಕೆಯ ನಿರೀಕ್ಷೆ ನಿಮಗೂ ಇದೆಯೇ?!! :)
-ಸವಿತ

Wednesday, November 11, 2009

ದ್ಯುತಿ ಸಂಶ್ಲೇಷಣೆ ಕ್ರಿಯೆ...ನನ್ನ ಕಲ್ಪನೆಯ...ನೀರ್ಬಣ್ಣ ಚಿತ್ರ!


ದ್ಯುತಿ ಸಂಶ್ಲೇಷಣೆ ಕ್ರಿಯೆ ಎಂದರೇನು?
"ಸಸ್ಯಗಳು ಮಣ್ಣಿನಿಂದ ಖನಿಜಾಂಶವನ್ನು ಮತ್ತು ನೀರನ್ನು ಹೀರಿಕೊಂಡು...ಸೂರ್ಯನ ಬೆಳಕನ್ನು ಉಪಯೋಗಿಸಿಕೊಂಡು, ಪತ್ರಹರಿತ್ತಿನ ಸಹಾಯದಿಂದ ತಮ್ಮ ಆಹಾರವನ್ನು ತಯಾರಿಸಿಕೊಳ್ಳುವ ಕ್ರಿಯೆಯನ್ನ ದ್ಯುತಿ ಸಂಶ್ಲೇಷಣೆ ಕ್ರಿಯೆಯೆನ್ನುವರು."
ಇದು ಆರೇಳನೇ ತರಗತಿಯಲ್ಲಿ ಕಲಿತ ಉತ್ತರ . :)

'ದ್ಯುತಿ ಸಂಶ್ಲೇಷಣೆ' ಪದ ಕನ್ನಡದ್ದಲ್ವಂತೆ, ಸಂಸ್ಕೃತದಿಂದ ಎರವಲಾಗಿ ಪಡೆದ ಪದ!
ಈ ನೀರ್ಬಣ್ಣ ಚಿತ್ರವನ್ನ ಡಾ.ಬಿ.ಜಿ.ಎಲ್.ಸ್ವಾಮಿಯವರ 'ಹಸುರು ಹೊನ್ನು' ಪುಸ್ತಕ ಓದಲಿಕ್ಕೆ ಶುರು ಮಾಡೋಕೆ ಮುಂಚೆ ಚಿತ್ರಿಸಿದ್ದು. "ಬೆಳಕಿನ ವಕ್ರೀಭವನ ಕ್ರಿಯೆ" ಅರ್ದಂಬರ್ದ ಇದೆ :)
-ಸವಿತ

Monday, November 9, 2009

ನನ್ನ Some ಶೋಧನೆ!!


ಆಗಷ್ಟೇ ಕನ್ನಡ ಮಾಧ್ಯಮದಲ್ಲಿ 10ನೇ ತರಗತಿ ಮುಗಿಸಿ, ಪ್ರಥಮ ಪಿ.ಯು.ಸಿ ಕಾಲೇಜಿಗೆ ಸೇರಿದ ದಿನಗಳು. ಹೊಸ ಕಾಲೇಜು, ಹೊಸ ಗೆಳತಿಯರು, ವಿಜ್ಞಾನದ ವಿಷಯಗಳು, ಭೌತ,ಸಸ್ಯ,ಜೀವ,ರಾಸಾಯನಿಕ ಶಾಸ್ತ್ರದ ಪ್ರಯೋಗಗಳು, ಗಣಿತ ಸಮೀಕರಣಗಳು....ಅದೂ ಎಲ್ಲಾ ಇಂಗ್ಲೀಷ್ ಮಾಧ್ಯಮದಲ್ಲಿ.....ಎಲ್ಲವೂ ಒಂಥರಾ ಹೊಸತೇ :)
 
ಒಂದಿನ ಮಧ್ಯಾಹ್ನ ನಾನು ಕಾಲೇಜಿನಿಂದ ಮನೆಗೆ ವಾಪಾಸ್ಸಾಗಿಊಟ ಮಾಡಿ ಟಿ.ವಿ. ಮುಂದೆ ಹಾಜರ್ರು. ನನ್ನ ತಮ್ಮ ಕೂಡ ಆವಾಗಲೇ ಬಂದ. ಅದ್ಯಾರೋ ಸ್ನೇಹಿತರು ಕೊಟ್ರು ಅಂತ ಒಂದು ಚಿಕ್ಕ ಸೀಸೆಯಲ್ಲಿ ಪಾದರಸವನ್ನ ತಂದಿದ್ದ. ಅಮ್ಮನಿಗೆ ಕಾಣದ ಹಾಗೆ ನನ್ನ ಬಳಿ ತಂದು ಒಮ್ಮೆ ಆ ಸೀಸೆಯನ್ನ ಜೋರಾಗಿ ಅಲುಗಾಡಿಸಿ ತೋರಿಸಿದ. ಒಂದು ದೊಡ್ಡ ಹನಿಯಂತಿದ್ದ ಪಾದರಸ ಒಡೆದು ಅನೇಕ ಚಿಕ್ಕ ಚಿಕ್ಕ ಹನಿಗಳಾದವು. ಮತ್ತೊಮ್ಮೆ ನಿಧಾನವಾಗಿ ಸೀಸೆಯನ್ನ ತಿರುಗಿಸಿದರೆ ಮತ್ತೆ ಮೊದಲಿನ ದೊಡ್ಡ ಹನಿಯಾಯ್ತು. ಇಷ್ಟಕ್ಕೆ ನಿಲ್ಲದ ಅವನು ಪೇಪರಿನ ಮೇಲೆ ನಿಧಾನವಾಗಿ ಸುರುವಿಈಗ ಅದು ಹೇಗೆ ಹರಿದಾಡತ್ತೆ ಅಂತ ತೋರಿಸಿದ್ದು ನನ್ನ ಕುತೂಹಲ ಕೆರಳಿಸಿತು. ಮತ್ತೆ ಪೇಪರಿನ ಮೂಲೆಯಲ್ಲೊಂದು ಚಿಕ್ಕ ಮಡಿಕೆ ಮಾಡಿ ಅದರಿಂದ ಪುನಃ ಪಾದರಸವನ್ನ ಸೀಸೆಯೊಳಗೆ ಹಾಕಿ....ಇದು ನನ್ನದು....ತೆಗೆದರೆ ನೋಡು ಅಂತ ಕಟ್ಟಾಜ್ಞೆಯೊಂದಿಗೆ ಟೇಬಲ್ ಮೇಲೆ ಸೀಸೆಯನ್ನಿಟ್ಟ. ನಾನು ಟೀವಿ ನೋಡುತ್ತಲೇ ಇದ್ದೆ.
 
ಊಟ ಮುಗಿಸಿ ತಮ್ಮ ಸ್ಕೂಲಿಗೆ ಹೊರಟುಹೋದ. ಅಲ್ಲಿಯವರೆಗೂ ಕುತೂಹಲ ತಡೆದಿಟ್ಟುಕೊಂಡಿದ್ದ ನನಗೊಂದು ಛಾನ್ಸ್....!! :) ನಿಧಾನವಾಗಿ ಸೀಸೆಯ ಮುಚ್ಚಳ ತೆಗೆದೆ (ರಾಸಾಯನಿಕ ವಸ್ತುವನ್ನ ಬರಿಗೈಯಲ್ಲಿ ಮುಟ್ಟಬಾರದು ಅಂತ ತಿಳಿದಿದ್ರೂ, ಏನೂ ಆಗೋಲ್ಲ ಅನ್ನೋ ಧೈರ್ಯದ ಮೇಲೆ) ಪಾದರಸವನ್ನ ಬರಿಗೈಯಲ್ಲಿ ಸ್ವಲ್ಪ ಒತ್ತಡದಲ್ಲಿ ಮುಟ್ಟಿದೆ. ಅದು ಚಿಕ್ಕ ಚಿಕ್ಕ ತುಣುಕುಗಳಾದವು..ಮತ್ತೆ ಬೆರಳಿಗೇನಾದ್ರು ಆಯ್ತಾ ಅಂತ ಒಮ್ಮೆ ನೋಡಿದೆ ಏನೂ ಆಗಿರಲಿಲ್ಲ. ಅದೇ ಧೈರ್ಯದ ಮೇಲೆ ಪಾದರಸವನ್ನ ಬಲಗೈ ಅಂಗಳದಲ್ಲಿ ಸುರುವಿಕೊಂಡು..ಬಲಗೈಯಿಂದ ಎಡಗೈಗೆಮತ್ತೆ ಎಡಗೈಯಿಂದ ಬಲಗೈಗೆ ಸುರಿದಾಡೋದು ಮಜಾ ಅನ್ನಿಸ್ತು.. :) 
 
ಬೆಳ್ಳಿ ಬಣ್ಣದ ಭಾರದ ದ್ರವ ರೂಪದ ಮೂಲವಸ್ತು.... ಪಾದರಸ...!! ಕೈಲಿದ್ದ ಪಾದರಸವನ್ನ ಹಾಗೆ ಹಿಡಿದಿಟ್ಟು ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ಹಾಡನ್ನ ನೋಡತೊಡಗಿದೆ. ಅಡುಗೆ ಮನೆಯಿಂದ ಅಮ್ಮ  ಕರೆದಾಗ, ಬಂದೆಮ್ಮಾ....ಅಂತ ಹೇಳಿ.... ನನ್ನ ಕೈ ನೋಡಿಕೊಂಡಾಗ.....ನನಗೆ ಒಂದು ಕ್ಷಣ ಸಕತ್ ಭಯ ಆಗೋಯ್ತು.....ಈಗ ಅಮ್ಮ ಕೇಳಿದ್ರೆ ಏನು ಹೇಳೋದು??? ಅಪ್ಪಂಗೆ ಏನು ಹೇಳಲಿ??ತಗೋಬೇಡಾ ಅಂತೇಳಿದ್ರೂ ಯಾಕೆ ತೆಗೆದೆ? ಅಂತ ತಮ್ಮ ದಬಾಯಿಸಿದರೆ ಏನು ಮಾಡೋದು?? ಅಂತ ಒಂಥರಾ ಭಯವಾಗೊಯ್ತು.!!!!

ನಾನು ಈ ಪಾದರಸವನ್ನ ಮುಟ್ಟಿದ್ದು, ನನ್ನ ತಮ್ಮ ಅದನ್ನ ಮನೆಗೆ ತಂದದ್ದು, ಅದ್ಯಾರೋ ಇವನಿಗೆ ಕೊಟ್ಟದ್ದು...ಅಯ್ಯೋ…..ಇವಿಷ್ಟೂ ನಡೀದೆ ಇದ್ದಿದ್ರೆ….ಈವತ್ತು ಎಷ್ಟು ಒಳ್ಳೆಯ ದಿನವಾಗಿರ್ತಿತ್ತು...ನನಗೆ ಗ್ರಹಚಾರ ತಪ್ಪಿದ್ದಲ್ಲ...ಅಂತ ಮನಸ್ಸಿನಲ್ಲಿ ಗೊಣಗಿಕೊಳ್ತಾ...ಪಾದರಸವನ್ನ ಸೀಸೆಯಲ್ಲಿ ಹಾಕಿಟ್ಟು..ಅದನ್ನ, ತಮ್ಮನನ್ನ, ನನ್ನನ್ನೂ ಶಪಿಸಿಕೊಳ್ತಾ ಕೈತೊಳೆಯಲು ಓಡಿದೆ..

ನೀರು ಹಾಕಿದರೂ ಊಹು...ಬಿಸಿನೀರುಊಹು...ಸೋಪು ಹಾಕಿ ಉಜ್ಜಿದರೂ ಊಹು..ಏನೂ ಆಗಲೇ ಇಲ್ಲ...... :(

ನನ್ನ ಎಡಗೈ ಬೆರಳಲ್ಲಿದ್ದ ಚಿನ್ನದ ಉಂಗುರ.....ಪಾದರಸದ ಬೆಳ್ಳಿ ಬಣ್ಣಕ್ಕೆ ತಿರುಗಿತ್ತು...!!!

ಆಗಲೇ ಕಣ್ಣಂಚಿನಲ್ಲಿ ಹನಿಗೂಡಿತ್ತು... ಮನಸ್ಸಿನಲ್ಲಿ ಒಂದೊಂದಾಗೆ ಉಂಗುರದ ಹಿನ್ನೆಲೆಯ ಚಿತ್ರಣಗಳು ಮೂಡುತ್ತಿದ್ದವು….. ಚಿನ್ನದುಂಗುರದ ಬೆಲೆ ಬಹಳ..ಅದಲ್ದೇ ಅಪ್ಪ ನನ್ನ ಹುಟ್ಟಿದ ಹಬ್ಬಕ್ಕೆ ಅಂತ ಪ್ರೀತಿಯಿಂದ ತೆಗೆದು ಕೊಟ್ಟದ್ದು....ಅದರ ಡಿಸೈನ್ ಕೂಡ ನನ್ನ ಸ್ವಂತದ್ದು...ಆ ದಿನ ಬಿಳಿ ಹಾಳೆಯ ಮೇಲೆ ಚಿತ್ರ ಬಿಡಿಸಿಕೊಂಡು ಅಪ್ಪನ ಜೊತೆ ಬಂಗಾರದಂಗಡಿಗೆ ನಾನೂ ಹೋಗಿದ್ದೆ. ಅಂಗಡಿಯವ ಅವನ ಬಳಿಯಿರೋ ಎಲ್ಲಾ ಡಿಸೈನಿನ ಉಂಗುರಗಳನ್ನ ನಮಗೆ ತೋರಿಸುವ ಮೊದಲೇ ನಾನು ಬರೆದ ಚಿತ್ರವನ್ನ ಅವನ ಮುಂದಿಟ್ಟಿದ್ದೆ....ಆ ಡಿಸೈನ್ ನೋಡಿ ಅಂಗಡಿಯವ ದಂಗಾಗಿದ್ದ..ಹೌದು ನನಗೆ ಇದೇ ಡಿಸೈನ್ ಬೇಕು ಅಂತ ಪಟ್ಟು ಹಿಡಿದಾಗ ಅವ ಪ್ರಯತ್ನಿಸುತ್ತೇನೆ ಅಂತ ಹೇಳಿದ.

ಷಡ್ಭುಜ ನಕ್ಷತ್ರದ ನಡುವೆ ಪ್ರಶ್ನಾರ್ಥಕ ಚಿನ್ಹೆ...!!!! ಹೌದ್ರೀ ಈಗ ನೀವು ದಂಗಾಗಬೇಡಿ.. :) 

ಹುಟ್ಟು ಹಬ್ಬದ ದಿನ ಅಪ್ಪ ನನಗೆ ಆ ಉಂಗುರದ ಡಬ್ಬಿಯನ್ನ ಕೊಟ್ಟಾಗ ನಾನು ಸಕತ್ ಆತುರದಲ್ಲಿದ್ದೆ...ಕಡು ಗುಲಾಬಿ ಬಣ್ಣದ ಕಾಗದದ ಒಳಗೆ ಮಿಣ್ಣನೆ ಮಿರುಗುತ್ತಿತ್ತು ಚಿನ್ನದುಂಗುರ.. :) ತೆಗೆದು ನೋಡಿದಾಗ ಷಡ್ಭುಜವೋಗಿ....ರಾಂಬಸ್ ಆಕೃತಿಯ ರೀತಿಯಾಕಾಯ್ತು??? ಅನ್ನೋ ಪ್ರಶ್ನಾರ್ಥಕ ಚಿನ್ಹೆ ನನ್ನ ನೋಟದಲ್ಲಿತ್ತು!!!!
ಬಂಗಾರದಂಗಡಿಯವನಿಗೆ ಷಡ್ಭುಜ ನಕ್ಷತ್ರ ಮಾಡ್ಲಿಕ್ಕೆ ಆಗಲಿಲ್ವಂತೆಅದಕ್ಕೇ ಈ ರೀತಿ ಮಾಡಿದಾನೆ ಅಂತ ಅಪ್ಪ ಸಮಾಧಾನ ಮಾಡಿದ ಮೇಲೆಹೋಗಲಿ ಬಿಡು ಚೆನ್ನಾಗಿದೆಯಲ್ಲ ಸಾಕು ಅಂದ್ಕೊಂಡೆ. 

ಇಷ್ಟೆಲ್ಲಾ ಹಿನ್ನೆಲೆಯುಳ್ಳ ಚಿನ್ನದುಂಗುರದ ಗತಿ ಹೀಗಾಗಿತ್ತು!! ಏನು ಮಾಡಲೂ ತೋಚದೆ ಕೊನೆಗೆ...ಇದೂ ಒಂದು ಹೊಸ ಸಂಶೋಧನೆಯಾಗಿದ್ದರೆ ???!!! ಅನ್ನೋದು ಹೊಳೆದಾಗ ಸ್ವಲ್ಪ ನಿರಾಳವೆನಿಸಿ ಒಂದೆರಡು ಬಾರಿ ದೀರ್ಘ ಉಸಿರನ್ನೆಳೆದುಕೊಂಡು ರಾಸಾಯನಿಕ ಶಾಸ್ತ್ರ ಪುಸ್ತಕದಲ್ಲಿದ್ದ ಎಲ್ಲಾ ಪಾಠಗಳನ್ನ ತಡಕಾಡಿದೆಸಿಕ್ತು….ಬಂಗಾರದ ಬಗ್ಗೆ ಇದೆ...ಆದರೆ ಪಾದರಸದೊಡನೆ ಪ್ರತಿಕ್ರಿಯೆಯ ಬಗ್ಗೆ ಇಲ್ಲ..ಸರಿ ಆದದ್ದಾಗಲಿ ಅಂತ ನೋಟ್ಸ್ ಹಿಡಿದು ಸೈಕಲ್ ಜೊತೆಗೆ ನಮ್ಮ ಕೆಮಿಸ್ಟ್ರಿ ಲೆಕ್ಚರ್ ಮನೆ ಕಡೆ ಹೊರಟೆ.
 
ಅವರಿಗೆ ನಡೆದದ್ದನ್ನೆಲ್ಲಾ ವಿವರಿಸಿದ ಮೇಲೆ....ಅವರು ಅವರ ಎಮ್ಮೆಸ್ಸಿ ಗ್ರಂಥಗಳನ್ನ ಹುಡುಕಾಡಿ ವಿಚಾರವನ್ನ ಹೇಳಿದರು...
ಪಾದರಸ ಬಂಗಾರದೊಡನೆ ಸೇರಿ (ಒಂದು ದ್ರವ ಮತ್ತು ಒಂದು ಘನ ಲೋಹ ಸೇರಿದರೆ) ಅಮಾಲ್ಗಂ ಆಗತ್ತೆ. ಈ ಉಂಗುರವನ್ನ ಹೆಚ್ಚಿನ ಉಷ್ಣತೆಯಲ್ಲಿ (ಬೆಂಕಿಯಲ್ಲಿ) ಕಾಯಿಸಿದರೆ ಪಾದರಸವನ್ನ ಬಂಗಾರದಿಂದ ಬೇರ್ಪಡಿಸಬಹುದು. ನಾಳೆ ಕೆಮಿಸ್ಟ್ರಿ ಲ್ಯಾಬ್ಗೆ ಉಂಗುರ ತಗೊಂಡು ಬನ್ನಿ ವಿಚಾರ ಮಾಡೋಣ ಅಂದರು….ಇದು ಇನ್ನೂ ಪೇಚಾಟಕ್ಕೆ ತಂದಿಟ್ಟಿತು. ಇದು ಹೊಸ ಸಂಶೋಧನೆಯೇನಲ್ಲ ಅಂತ ಅರಿವಾದೊಡನೆ ಅಲ್ಲಿಂದ ಜಾಗ ಖಾಲಿ ಮಾಡೋದು ಬಹಳ ಸೂಕ್ತ ಅನ್ನಿಸಿತು.

ಲ್ಯಾಬಿಗೆ ತಗೊಂಡೋಗಿ ಕಾಯಿಸಿಇನ್ನೇನೋ ಮಾಡಿ...ಉಂಗುರ ಮೊದಲಿನಂತಾದರೆ ಸರಿ…..ಗ್ರಹಚಾರವಶಾತ್ ಕರಗಿ...ಆವಿಯಾಗಿಇನ್ನೋನೋ ಆದರೆ ಅಮ್ಮ ಅಪ್ಪನಿಗೆ ಹೇಳಲು ಏನೂ ಇರದೇನನ್ನ ಬಳಿ ಉಳಿಯೋದು...ಬರೀ ಪ್ರಶ್ನಾರ್ಥಕ ಚಿನ್ಹೆಯೊಂದೇ....???
 
ಮನೆಗೆ ಬಂದು ಸಂಜೆ ಅಪ್ಪ ಬರುವುದನ್ನೇ ಕಾದೆ.. ಅಪ್ಪನ ಹಾಜರಿಯಲ್ಲಿ ಅಮ್ಮನ ಬಳಿ ಮಾತಾಡಲು ಒಂಥರಾ ಧೈರ್ಯ :) ಉಂಗುರವನ್ನ ಪೇಪರಿನೊಳಗಿಟ್ಟು ಓದಲು ಪ್ರಯತ್ನಿಸಿದೆ..ಆಗಲೇ ಇಲ್ಲ ಮನಸ್ಸು ಪದೇ ಪದೇ ಉಂಗುರದ ಕಡೆಗೆ ಹೊರಳುತ್ತಿತ್ತು. ಅಪ್ಪ ಮನೆಗೆ ಬಂದ ಕೂಡಲೇ ಪಟಪಟನೆ ನಡೆದದ್ದನ್ನೆಲ್ಲಾ ಹೇಳಿ ಉಂಗುರವಿದ್ದ ಕಾಗದದ ಪೋಟ್ಟಣವನ್ನ ಅವರ ಕೈಗಿಟ್ಟೆ. ಅಪ್ಪ ಬೈಯಲ್ಲ ಅಂತ ಗೊತ್ತಿದ್ರೂ...ಅವರ ಪ್ರತಿಕ್ರಿಯೆಗೆ ಕಾದೆ. ಎಂಥಾ ಬೇಜವಭ್ದಾರಿತನ..ಪಿಯುಸಿಗೆ ಬಂದರೂ ಕೂಡ ಹುಡುಗಾಟಿಕೆ ಹೋಗಿಲ್ಲ....ಅದೂ ಇದೂ ಬೈತಾರೆ ಅಂತ ಕಾದೆ. ಆದರೆ ಬೈಯಲಿಲ್ಲ. ಈ ವಿಷಯವನ್ನ ಜಾಸ್ತಿ ತಲೆಗೆ ಹಚ್ಚಿಕೊಳ್ಳದೆ ಓದ್ಕೋ, ನಾಳೆ ಬಂಗಾರದನ್ಗಡಿಗೆ ಹೋಗಿ ಸರಿ ಮಾಡಿಸಿಕೊಂಡು ಬರ್ತೀನಿ ಅಂದ್ರು. ಅಮ್ಮಂಗೆ ಹೇಳಲಾ? ಅಂದದ್ದಕ್ಕೆ ನೀನು ಬೇಡ ನಾನು ಹೇಳ್ತೀನಿ ಅಂದದ್ದು ಕೇಳಿ...ಸದ್ಯಬದುಕುಳಿದೆ ಬಡಜೀವ ಅಂತ ನನ್ನನ್ನ ನಾನೇ ಸಂತೈಸಿಕೊಂಡು ಓದಲು ಕುಳಿತೆ. ಸ್ಕೂಲಿನಿಂದ ಬಂದ ತಮ್ಮ ಮತ್ತೆ ಪಾದರಸದ ಸೀಸೆಯೊಡನೆ ಆಡತೊಡಗಿದ...ನನಗಾಗಲೇ ಪಾದರಸದ ಬಗ್ಗೆ ಸಿಟ್ಟು ನೆತ್ತಿಗೇರಿತ್ತು.

ಮರುದಿನ ಸಂಜೆ ಮತ್ತೆ ಕಡು ಗುಲಾಬಿ ಕಾದಗದಲ್ಲಿ ಉಂಗುರ ತನ್ನ ಮೊದಲ ಬಣ್ಣದಲ್ಲಿ ಮಿಂಚುತ್ತಿತ್ತು :) ಅರೆ ಏನಾಗಿತ್ತಂತೆ? ಅದು ಹೇಗೆ ಸರಿಹೋಯ್ತು? ಬಂಗಾರದಂಗಡಿಯವ ಏನು ಮಾಡಿದ? ಅಂತ ನನ್ನ ಪ್ರಶ್ನೆಗಳನ್ನ ಕೇಳಿ...
ಪಾದರಸ ಬಂಗಾರವನ್ನ ತಿಂದಿತ್ತಂತೆ..ಇನ್ನೂ ಜಾಸ್ತಿ ಸಮಯ ಬಿಟ್ಟಿದ್ರೆ ಪೂರ್ತಿ ತಿಂದು ಹಾಕ್ತಿತ್ತಂತೆ....:) ಬೆಂಕಿಯಲ್ಲಿ ಕಾಯಿಸಿ ಪಾದರಸ ಬೇರ್ಪಡಿಸಿ ಕೊಟ್ಟ,  ಬಂಗಾರದ ಗಣಿಗಳಲ್ಲಿ ಪಾದರಸವನ್ನ ಬಹಳವಾಗಿ ಉಪಯೋಗಿಸ್ತಾರಂತೆ ಅಂತ ಅಪ್ಪ ಹೇಳಿದಾಗ ನನಗೆ ನಿಜವಾಗಿ ಅಚ್ಚರಿಯಾಯ್ತು. ಪಾದರಸದ ಬಗ್ಗೆ ಇದ್ದ ಸಿಟ್ಟು ಸ್ವಲ್ಪ ಕಡಿಮೆಯಾಯ್ತು... :)
ಒಂದೆರಡು ಸಾಲು ಆ ಎರಡೂ ಲೋಹಗಳ ಬಗ್ಗೆ:
ಬಂಗಾರ (Au): ಲ್ಯಾಟಿನ್ನಲ್ಲಿ Aurum ಅಂತ ಕರೆಯಲ್ಪಡುವ ಬಂಗಾರದ ಬಗ್ಗೆ ಎಲ್ಲರಿಗೂ ಗೊತ್ತಿದೆ :D 
ಪಾದರಸ (Hg): ಮೂಲವಸ್ತುಗಳ ಕೋಷ್ಟಕದಲ್ಲಿ ಬಂಗಾರದ ಪಕ್ಕವೇ ಪಾದರಸ ಇರೋದು. ಲ್ಯಾಟಿನಲ್ಲಿ-hydrargyrum ಮತ್ತು ಗ್ರೀಕ್ನಲ್ಲಿ- hydrargyros ಅಂತ ಕರೀತಾರೆ. ರೋಮನ್ ದೇವತೆ ಮೆರ್ಕ್ಯುರಿಯ ನೆನಪಾಗಿ ಈ ದ್ರವ ರೂಪದ ಮೂಲವಸ್ತುವಿಗೆ ಮೆರ್ಕ್ಯುರಿ ಅಂತ ನಾಮಕರಣ ಮಾಡಿದರೂ ಚಿಹ್ನೆ ಮಾತ್ರ Hg ಅಂತಾನೆ ಉಪಯೋಗಿಸೋದು. ಪರಿಸರ ಮಾರಕವಾದ ಪಾದರಸದ ಬಳಕೆಯನ್ನ ಬಹು ದೇಶಗಳಲ್ಲಿ ನಿಷೇಧಿಸಲಾಗಿದೆ. ಆದರೂ ನಿಖರ ಕಾರ್ಯ ವೈಖರಿಯ ಪ್ರಭಾವದಿಂದ ಈಗಲೂ ಕೂಡ ಉಷ್ಣಮಾಪಕಗಳಲ್ಲಿ ಪಾದರಸದ ಬಳಕೆಯನ್ನ ಮಾತ್ರ ನಿಲ್ಲಿಸಿಲ್ಲ.
ಹೆಚ್ಚಿನ ವಿಚಾರ:
ವಿ.ಸೂ:
1. ಪಾದರಸ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ ಕೂಡ, ಬರಿ ಕೈಯಲ್ಲಿ ಮುಟ್ಟೋದು ಇನ್ನೂ ಡೇಂಜರ್!!!
2. ಲೇಖನ ಓದಿ ನೀವು ಪ್ರಯೋಗ ಮಾಡಬೇಡಿ. ಹಾಗೇನಾದರೂ ಮಾಡಿ ನಿಮ್ಮ ಉಂಗುರ ಹಾಳು ಮಾಡಿಕೊಂಡರೆ ಮಾತ್ರ ನಾನು ಜವಾಬ್ದಾರಳಲ್ಲ.

ಧನ್ಯವಾದಗಳು
-ಸವಿತ


ಸಾತ್ವಿಕ್ ಅವರ ನಿಮ್ಮಲ್ಲಿ ಒಬ್ಬ ಸಂಶೋಧಕನಿದ್ದಾನೆಯೇ? ಪ್ರಶ್ನೆ ನನಗೆ ಈ ಲೇಖನವನ್ನ ಬರೆಯಲು ಪ್ರೇರೇಪಿಸಿತು :) 
(ಚಿತ್ರ ಕೃಪೆ: ನನ್ನ ಸ್ವಂತದ್ದು) 

Thursday, November 5, 2009

ಹೈದರಾಬಾದ್ ಗೆ ಹೋದ್ರೆ..!!ನೀವೇನಾದ್ರೂ ಹೈದರಾಬಾದ್ ಗೆ ಹೋಗೋವ್ರಿದ್ರೆ ಈ ಲೇಖನ ಉಪಯೋಗವಾಗಬಹುದು. ಅಲ್ಲಿ ಏನೇನು ನೊಡಬಹುದು ಅಂತ ಒಂದಷ್ಟು ವಿಚಾರಗಳು.

ಸುಮ್ನೆ ನೋಡ್ಕೊಂಡು ಬರ್ತೀನಂದ್ರೂ ಒಂದು ವಾರ ಮಿನಿಮಮ್ ಬೇಕು. ಬೇಸಿಗೆ ರಜೆಯಲ್ಲಿ ಮಾತ್ರ ಹೋಗ್ಬೇಡಿ....ರೋಸ್ಟ್ ಆಗ್ಬಿಡ್ತೀರ!!!
ಅಲ್ಲಿನ ಉರ್ದು ಮಿಶ್ರಿತ ಹಿಂದಿ ಮಾತಾಡೋ ಶೈಲಿ ಮಾತ್ರ ಸಕತ್!! ಕೇಳೋದಕ್ಕೆ ಮಜಾ!


ನಾನು ಮಾದಾಪುರ(ಹೈಟೆಕ್ ಸಿಟಿ) ರೆಫ಼ೆರೆನ್ಸಿಂದ ಶುರು ಮಾಡ್ತಿದ್ದೀನಿ. ಹೈಟೆಕ್ ಸಿಟಿ ಒಂತರಾ ನಮ್ಮ ಎಲೆಕ್ರ್ಟಾನಿಕ್ ಸಿಟಿ ತರ. ದ್ವಾರದಲ್ಲೇ "ಶಿಲ್ಪಾರಾಮಂ" ಪಾರ್ಕ್ ಇದೆ.
"ದುರ್ಗಂ ಚೆರುವು"ಗೆ (Secret Lake) ಹೈಟೆಕ್ ಸಿಟಿ ಒಳಗಿಂದ ಹೋಗಿ ಆಚೆ ದಡದಲ್ಲಿರೋ ಉದ್ಯಾನವನಕ್ಕೆ ತೆಪ್ಪದಲ್ಲಿ ಹೋಗೋದು ಚೆನ್ನಾಗಿರತ್ತೆ...ಉದ್ಯಾನವನದೊಳಗಿಂದ ಮೆಟ್ಟಿಲು ಹತ್ತಿ ಗುಡ್ಡದ ತುದಿಯಲ್ಲಿ ನಿಂತು ಸುತ್ತಲಿನ ವಿಶಾಲತೆಯನ್ನ ಅನುಭವಿಸೊದು..ವಾವ್!! ಶುಕ್ರವಾರವೋ ಭಾನುವಾರವೊ ನೆನಪಿಲ್ಲ ಸೌಂಡ್ & ಲೈಟ್ ಪ್ರೊಗ್ರಾಮ್ ಇರತ್ತೆ!!

"ಚಾರ್ಮಿನಾರ್"ನಲ್ಲಿ ನಿಮ್ಮನೆ ಮತ್ತು ಅಕ್ಕ ಪಕ್ಕದ್ಮನೆಯ ಹೆಣ್ಮಕ್ಕಳಿಗೆಲ್ಲಾ ಮುತ್ತು ಪೋಣಿಸಿದ ಬಳೆಗಳನ್ನ ತಗೊಳ್ಳಿ..ಹಾಗೆ ರೋಡ್ ಸೈಡ್ನಲ್ಲಿ ಫ಼ಸ್ಟ್ ಕ್ಲಾಸ್ ಇರಾನಿ ಟೀ ಟೇಸ್ಟ್ ಮಾಡಬಹುದು :) ಮಸೀದಿ ಕಾಂಪೌಂಡಿನಲ್ಲಿ ಹಾರಾಡೋ ಗುಂಪು ಗುಂಪು ಪಾರಿವಾಳಗಳಿಗೆ ಒಂದಷ್ಟು ಕಾಳು ಹಾಕಿ..

IMAX ನಮ್ಮ ಫೋರಂ ತರಾನೆ, PVR ನಲ್ಲಿ ಒಂದಷ್ಟು ತೆಲುಗು ಸಿನೆಮಾ ನೋಡಿ.. ಸಂಜೆ ಹೊತ್ತು ಟ್ಯಾಂಕ್ ಬಂಡ್ ರೋಡ್ನಲ್ಲಿ Walking ಮಾಡ್ತಾ Ice Cream ತಿನ್ನೋದು ಸಕತ್ತಾಗಿರತ್ತೆ!

ಅಲ್ಲೇ ಹತ್ತಿರದಲ್ಲಿರೋ ಸ್ನೋ ವರ್ಲ್ಡ್ಗೆ ಹೋಗಿ, ಇನ್ನೂರು ರೂಪಾಯಿಗೆ ಒಂದು ಗಂಟೆ ಹಿಮಾಲಯದ ಅನುಭವ ಸಿಗತ್ತೆ! ನಿಜವಾಗ್ಲೂ..

ಮತ್ತೆ ಬಿರ್ಲಾ ಮಂದಿರ್ಗೆ ಹೋಗಿ, ಹುಸೇನ್ ಸಾಗರ್, NTR ಪಾರ್ಕು ಹತ್ತಿರದಲ್ಲೆ ಇವೆ..ಹುಸೇನ್ ಸಾಗರ್ ನೀರು ಬಹಳ ಗಲೀಜು..:( ಬೋಟ್ನಲ್ಲಿ ಹೋಗೋದು ನಿಮಗೆ ಬಿಟ್ಟಿದ್ದು.. ಹೋದ್ರೆ ಮದ್ಯದಲ್ಲಿರೋ ಬುದ್ದನ ವಿಗ್ರಹವನ್ನ ನೋಡಬಹುದು.

ಹೈದರಾಬಾದ್ಗೆ ಹೋಗಿ ಹೈದರಾಬಾದ್ ಬಿರಿಯಾನಿ ತಿನ್ನಲಿಲ್ಲಾ ಅಂದ್ರೆ ಲೈಫ಼ೇ ವೇಷ್ಟು ಅಂತ ನನ್ನ ಸ್ಟ್ರಾಂಗ್ ಫೀಲಿಂಗು. ಹೈದರಾಬಾದ್ ಬಿರಿಯಾನಿಗೆ ಸಿಕಂದರ್ರಬಾದ್ನಲ್ಲಿರೋ ಪ್ಯಾರಡೈಸ್ಗೇ ಹೋಗಿ, ಆಮೇಲೆ ಅಲ್ಲೇ ಪಕ್ಕದ ರೋಡಲ್ಲಿ ಸಿಗೋ ಸ್ವೀಟ್ ಪಾನ್ ಸವಿಯೋದನ್ನ ಮಾತ್ರ ಮರೀಬೇಡಿ :)

ಗೋಲ್ಕೊಂಡ ಕೋಟೆಗೆ ಹೋಗಿ, ಸಂಜೆ ಸೌಂಡ್ & ಲೈಟ್ ಪ್ರೋಗ್ರಾಮ್ ಮುಗಿಯೋವರೆಗೂ ಇರಿ.. ಅಮಿತಾಬ್ ಬಚ್ಚನ್ ಗೋಲ್ಕೊಂಡ ಕೋಟೆಯ ಕತೆ ಹೇಳ್ತಾರೆ! ಆದ್ರೂ ನಮ್ಮ ಚಿತ್ರದುರ್ಗದ ಕೋಟೆಯಷ್ಟು ಭದ್ರವಿಲ್ಲ ಬಿಡಿ :)

ಆರ್ಚಿಯೋಲಾಜಿಕಲ್ ಮ್ಯೂಸಿಯಂನಲ್ಲಿರೋ ಬುದ್ದನ ಕಲ್ಲಿನ ವಿಗ್ರಹಗಳು ನನಗಂತೂ ಅಚ್ಚರಿ ಮೂಡಿಸಿದ್ವು..ಆಗಿನ ನವಾಬ ಕೊಂಡು ತಂದಿರೋ "ಮಮ್ಮಿ" ನೋಡೋದನ್ನ ಮರೀಬೇಡಿ!! (ಈಜಿಪ್ಟಿಗೆ ಹೋಗ್ತೀವೊ ಇಲ್ವೋ ಗೊತ್ತಿಲ್ಲ!!) ಸಾಲಾರ್ಜಂಗ್ ಮ್ಯೂಸಿಯಂನಲ್ಲಿ ನಿಜಾಮರ ಕಾಲದ ಅತ್ಯಮೂಲ್ಯ ದಿರಿಸುಗಳು,ಆಭರಣ,ಕತ್ತಿ,ಗುರಾಣಿ,ಚಿತ್ರಕಲೆ...ಅಳಿದುಳಿದ ಇತಿಹಾಸದ ವಸ್ತುಗಳಿವೆ.

ಸಿಕಂದರಾಬಾದ್ನಲ್ಲಿ ಒಳ್ಳೆಯ ಮುತ್ತು,ಹವಳಗಳು ಸಿಗುತ್ತವೆ...ನಿಮ್ಮ ಆಫೀಸ್ id card ತಗೊಂಡು ಹೋಗಿ, ಯಾಕಂದ್ರೆ ಕಾರ್ಪೊರೇಟ್ ಡಿಸ್ಕೌಂಟ್ ಅಂತ ೧೫-೨೦% ಕೊಡ್ತಾರೆ :) ಹಾಗೇ ಗೊತ್ತಿರೋರನ್ನ ಕರೆದುಕೊಂಡು ಹೋದ್ರೆ ಒರಿಜಿನಲ್ ಮುತ್ತು,ಹವಳಗಳು ಸಿಗುತ್ತವೆ...ಇಲ್ಲಾಂದ್ರೆ ನಿಮಗೊಂದು ಟೋಪಿ ಗ್ಯಾರಂಟಿ! :)

ಅಮೀರಪೆಟ್ನಿಂದ ಹೈಟೆಕ್ ಸಿಟಿಗೆ ಶೇರಿಂಗ್ ಆಟೋದಲ್ಲಿ ಹೋಗಿ..!!

ಕಾಚಿಗುಡದಲ್ಲಿ ಕನ್ನಡಿಗರು ತುಂಬಾ ಜನರಿದ್ದಾರೆ ಮತ್ತಲ್ಲಿ ರಾಯರ ಮಠ ಕೂಡ ಇದೆ.ಅಲ್ಲೇ ಒಂದು ಅಂಗಡಿಯಲ್ಲಿ ಚಾಕೋಲೇಟ್ ಫ್ಲೇವರ್ ಟೀ ಪುಡಿ ಸಿಗತ್ತೆ.ಬಹಳ ರೇರ್..ರುಚಿ ಮಾತ್ರ ಸೂಪರ್!

ಊರ ಹೊರಗೆ "ಚಿಲ್ಕೂರು ಬಾಲಾಜಿ" ದೇವಸ್ಥಾನವಿದೆ..ಇದನ್ನ VISA Temple ಅಂತಾನು ಕರೀತಾರೆ ಯಾಕಂದ್ರೆ ಅಲ್ಲಿ ಹೋಗಿ ೧೦೧ (೧೦೮ ಅನ್ನಿಸುತ್ತೆ!!) ಪ್ರದಷ್ಕಿಣೆ ಹಾಕಿದ್ರೆ ನಿಮ್ಗ್ಂತೂ VISA ಸಿಗೋದು ಗ್ಯಾರಂಟಿ !! :)

ರಾಮೋಜಿ ಫಿಲ್ಮ್ ಸಿಟಿಗೆ ವಿಕೆಂಡ್ನಲ್ಲೇ ಹೋಗಿ..ಪೂರ್ತಿ ನೋಡ್ಲಿಕ್ಕೆ ಒಂದು ದಿನವಂತು ಬೇಕೇ ಬೇಕು.

ಎಲ್ಲಿಗೆ ಹೋದ್ರೂ ಕ್ಯಾಮೆರಾ ತಗೊಂಡು ಹೋಗೋದನ್ನ ಮರೀಬೇಡಿ..

ಬರೋವಾಗ ಪುಲ್ಲಾ ರೆಡ್ಡಿ ಸ್ವೀಟ್ಸ್ಗೆ ಹೋಗಿ ಸಕ್ಕತ್ ಸ್ವೀಟ್ಸ್! ಬರೀ ತುಪ್ಪದಲ್ಲೇ ಮಾಡಿರೋದು!! ಒಮ್ಮೆ ತಿಂದು ನೋಡಿ... ಕೆಜಿಗಟ್ಟಲೆ ತಗೊಂಡು ಬರ್ತೀರಾ!!!

ಬೆಂಗಳೂರಿಗೆ/ನಿಮ್ಮ ಊರಿಗೆ ಬಂದ ಮೇಲೆ ನಿಮ್ಮ ಹೈದರಾಬಾದ್ ಅನುಭವ ಹೇಗಿತ್ತು ತಿಳಿಸಿ.

ಹೈದರಾಬಾದ್ನಲ್ಲಿ ಎರಡು ಬೇಸಿಗೆ,ಮಳೆ ಮತ್ತೊಂದೂವರೆ ಛಳಿಗಾಲ ನೋಡಿದ್ದೆ. ಅಲ್ಲಿಂದ ಟ್ರಾನ್ಸ್ಫರ್ ಮಾಡಿ ಅಂತ ಒಂದೇ ಸಮನೆ ಗೋಳೊಯ್ಕೊಂಡು ಬೆಂಗಳೂರಿಗೆ ಬಂದ ಮೇಲೆ ಹೈದರಾಬಾದ್ನ ತುಂಬಾ ಮಿಸ್ ಮಾಡ್ಕೊಂಡೆ! ಅದ್ಯಾಕೋ ಗೊತ್ತಿಲ್ಲ ಹೈದರಾಬಾದ್ ಮಾತ್ರ ಸಿಕ್ಕಾಪಟ್ಟೆ ಇಷ್ಟವಾಯ್ತು..ಇದೆಲ್ಲ ಬರೀವಾಗ ನಾನೇ ಹೈದರಾಬಾದ್ಗೆ ಹೋಗಿ ಬಂದಂತಾಯ್ತು.

-ಸವಿತ
(ಚಿತ್ರ ಕೃಪೆ : ವಿಕಿಪೀಡಿಯಾ)

Wednesday, November 4, 2009

ಏನು ಮಾಡಲಿ ನಾನು..?


ಮೊಗ್ಗರಳಿ ಹೂವಾಗಿ,
ಮರಿದುಂಬಿ ಹಾರಾಡಿ,
ಹಸಿರಾದ ಕಾಯಾಗಿ,
ರಸ ತುಂಬಿ ಹಣ್ಣಾಗಿ,
ಕೈ ಬೀಸಿ ಕರೆಯುತಿರೆ...
ಎನ್ನ ಮನೆಯಂಗಳದ ಮಾವು..
ಏನು ಮಾಡಲಿ ನಾನು..?


ಕವನ ಬರೆಯಲೇ...
ಇಲ್ಲ ಕತೆಯ ಕಟ್ಟಲೆ...
ಪದ ಪದಗಳ ಜೋಡಿಸಿ
ಪದ್ಯ ಬರೆಯಲೇ...
ಏನು ಬೇಡವೆನಿಸಿದಾಗ,
ಋತು ಋತುವಿಗೂ
ನಿಸರ್ಗ ಸೃಷ್ಟಿಸುವ ಪ್ರಕೃತಿಯ

ಕೊಂಡಾಡುತ ಸುಮ್ಮನಿರಲೇ..!?! :)

-ಸವಿತ

Saturday, October 17, 2009

ಬಣ್ಣದ ತಗಡಿನ ತುತ್ತೂರಿ...

ಜಿ.ಪಿ.ರಾಜರತ್ನಂ - ಶತಮಾನದ ಕವಿಯ ಪರಿಚಯ ಶಿಶು ಗೀತೆಗಳ ಮೂಲಕ...

ಪದ್ಯ ಶುರುವಾದ ಸಮಯ:
೧೯೩೨ರಲ್ಲಿ ರತ್ನ ಎಂ.ಎ ಪಧವೀಧರರಾಗಿದ್ದರು.ಆ ಕಾಲದಲ್ಲಿ ಕನ್ನಡ ಎಂ.ಎ ಮಾಡಿದವರ ಸಂಖ್ಯೆ ತೀರಾ ಕಡಿಮೆ...ಆದರೂ ಅವರು ಕಲಿತಿದ್ದ ವಿದ್ಯೆಯನ್ನು ಉಪಯೋಗಿಸುವ ಯಾವ ಉದ್ಯೋಗ ಸಿಕ್ಕಿರಲಿಲ್ಲ. ಮುಂದೆ ಏನು ಮಾಡಬೇಕೆನ್ನೋದು ತೊಚದೇ ಇದ್ದ ಸಮಯ. ಆರೋಗ್ಯ ಕೆಟ್ಟಿದ್ದರಿಂದ ಅವರ ತಂದೆ ರಜ ತೆಗೆದುಕೊಳ್ಳಬೇಕಾಗಿ ಬಂದಾಗ, ತಂದೆಯ ಜಾಗಕ್ಕೆ ಬದಲಿಯಾಗಿ ರತ್ನ ಹೋದರು. ಅವರ ತಂದೆ ಮಿಡ್ಲಿಸ್ಕೂಲಿನ ಎರಡು ಮೂರನೇ ತರಗತಿಗಳಿಗೆ ಪಾಠ ಹೇಳುತ್ತಿದ್ದರು. ಅವರ ಬದಲಿಗೆ ಹೋದ ರತ್ನರಿಗೂ ಅದೇ ಪಾಠ ಬಿತ್ತು...!!

ಎಂ.ಎ ಪರೀಕ್ಷೆ ಪಾಸುಮಾಡಿದವರಿಗೆ ಮಿಡ್ಲಿಸ್ಕೂಲ್ ಪಾಠ ಮಾಡುವುದು ಏನು ಕಷ್ಟವೇ....?! ಎಂದುಕೊಂಡು ಯಾವ ಪೂರ್ವ ಸಿದ್ಧತೆಗಳಿಲ್ಲದೆ ತರಗತಿಗೆ ಹೋದರು. ಆವತ್ತು ಮಾಡಬೇಕಾದ ಪಠ್ಯ ಭಾಗವನ್ನ ಓದಿಕೊಂಡರು.

"ಎಂಟು ಗೇಣಿನ ದೇಹ...ರೋಮಗಳೆಂಟು ಕೋಟಿಯು...ಮೂಳೆಯರವತ್ತೆಂಟು...ಇತ್ಯಾದಿ....ಈ ದೇಹ ಕಟ್ಟಿಕೊಂಡು ಏಕೆ ಗೊಳಾಡುತ್ತೀ...ಪರಮಾತ್ಮನನ್ನ ಧ್ಯಾನಿಸಿ ಪರಲೋಕಕ್ಕೆ ಹೋಗು ಮಗು" ಎಂದು ಮೊದಲಾಗುವ ಹರಿಭಕ್ತಿ ಸಾರದ ಪದ್ಯ ಪಾಠವನ್ನು ಎರಡನೇ ತರಗತಿಯ ಮಕ್ಕಳಿಗೆ ಭೊದಿಸಬೇಕಾಗಿತ್ತು!!!ಅದನ್ನ ಹೇಗೆ ಮಾಡುವುದೆಂದು ದಿಕ್ಕು ಕಾಣದೆ, ಮುಂದಿನ ಗದ್ಯ ಪಾಠವನ್ನ ಓದಿದರು..
"ದೇವರು ಎಂಬ ವ್ಯಕ್ತಿಯು ಇರುವುದೇ? ಎಂಬುದರ ಕುರಿತಾಗಿ ವಿಚಾರಪರ ರಾಯರಿಗೂ ಭಕ್ತಾಗ್ರೇಸರ ಶಾಸ್ತ್ರಿಗಳಿಗೂ ನಡೆದ ಒಂದು ಸಂವಾದ." ಬರೆದವರಿದೆ ಅದು ಇಷ್ಟವಾಗಿರಬಹುದು ಆದರೆ ಎರಡನೇ ತರಗತಿಯ ಮಕ್ಕಳಿಗೆ ಅಲ್ಲ.. 
ಎರಡನೆಯ ತರಗತಿಗೆ ಹೋದರು ಅಲ್ಲಿ ಮೊದಲನೆ ಪಾಠ: 'ಸೌವರ್ಣಮಧ್ಯ ಸ್ಥಿತಿ' ಹಾಗೆಂದರೆ? ಅರ್ಥವಾಗಲಿಲ್ಲ....ಅಲ್ಲೇ ಪಕ್ಕದಲ್ಲಿ ಇಂಗ್ಲೀಷಿನಲ್ಲಿ "The Golden Mean" ಎಂದು ಬರೆದಿದ್ದರು...!!!ಅವರ ಮೇಷ್ಟ್ರುತನದ ಮೊದಲನೆ ದಿನ ಹೀಗೆ ಆರಂಭವಾಯಿತು... :)

"ಪರಮಾತ್ಮಾ! ಮಕ್ಕಳಿಗೆ ಹೇಳಬೇಕಾದುದನ್ನ ಸುಲಭವಾಗಿ ಸರಳವಾಗಿ ತಿಳಿಸಲು ಸಾಧ್ಯವಿಲ್ಲವೇ? ಪಠ್ಯ ಪುಸ್ತಕದ ಪಾಠಗಳು ಅರ್ಥವಾಗಲಿ ಬಿಡಲಿ ಮಾಡಿಯೇ ತೀರಬೇಕು. ಇದರ ಜೊತೆಗೆ ಮಕ್ಕಳಿಗೆ ಉಲ್ಲಾಸ ಕೊಡುವ ಉತ್ಸಾಹಗೊಳಿಸುವ ಕತೆ ಕವನಗಳನ್ನ ಕೂಡಿಸಬಾರದೇಕೆ??" ಅನ್ನೋ ಮನಸಾಯಿತು ಹಾಗೆ ಕಟ್ಟಿ ಹೇಳಿ ಕೊಟ್ಟ ಮೊದಲ ಕವನವೇ 'ತುತ್ತೂರಿ'... :)

"ಬಣ್ಣದ ತಗಡಿನ ತುತ್ತೂರಿ...
ಕಾಸಿಗೆ ಕೊಂಡನು ಕಸ್ತೂರಿ..."

ಎಂದು ಹೇಳಿಕೊಂಡು ಮಕ್ಕಳು ಶಾಲೆಯಲ್ಲಿ, ಮನೆಯ ಬಳಿ ಕುಣಿದಾಡುವ ಗದ್ದಲ ಕಿವಿಗೆ ಬೀಳದಿದ್ದುದು ಅಪೂರ್ವ. ಅವರ ಉಲ್ಲಾಸಕ್ಕೆ ತುತ್ತೂರಿಯೊಂದೇ ಸಾಕಾಗಿತ್ತು....ಅದೆಷ್ಟು ಸಲ ಓದಿದರೂ... ಊದಿದರೂ...ಅವರು ದಣಿದದ್ದು ಕಾಣಿಸಲಿಲ್ಲ. ಅದೇ ಪಟ್ಟಿನಲ್ಲಿ ದಿನಕ್ಕೆ ಮೂರು ನಾಲ್ಕು ಕವನಗಳಂತೆ ಬಾಲಕರೊಡನೆ ಬಾಲಕರಾಗಿ ಹೇಳಿಕೊಟ್ಟರು. 
ಹಾಗೆ ರತ್ನರು ಶಿವರಾಮ ಕಾರಂತರ ಮಕ್ಕಳ ಕೂಟದಲ್ಲಿ ಹೇಳಿಕೊಟ್ಟ ಮತ್ತೊಂದು ಪದ್ಯ:

ದೊಡ್ಡ ಪಟ್ಟೆ ಹುಲಿ
ಕಾಡುದಾರಿಯಲಿ
ನಡುಗಿ ನಿಂತು ಹೇಳಿತಿಂತು
ಅಯ್ಯೋ ಅಪ್ಪ ಚಳಿ ||

ಮುಂದಿನ ವರ್ಷದ ಮಕ್ಕಳ ಕೂಟಕ್ಕೆ ಹೋದಾಗ ಅಲ್ಲಿಗೆ ಬಂದಿದ್ದ ಮಕ್ಕಳಿಂದ ಚುಟುಕುಗಳ ಸುರಿಮಳೆ. ಬಂದವರಲ್ಲಿ ಒಬ್ಬೊಬ್ಬನೂ ಐವತ್ತು ನೂರು ಚುಟುಕ ಹೊಸೆದು ತಂದಿದ್ದರಂತೆ..ಚಿಕ್ಕ ಹುಡುಗ ಬರೆದ ಒಂದು ಚುಟುಕ,

ಸರಕು ಇರುವ ಗಾಡಿ
ಹೋಗುತಿತ್ತು ಓಡಿ
ಕದಿಯಲೆಂದು
ಗಾಡಿ ಹಿಂದೆ
ಓಡುತಿದ್ದ ಕೇಡಿ ||

ಅವರ ತುತ್ತೂರಿ, ಕಡಲೆ ಪುರಿ, ಚುಟುಕ, ಕಲ್ಲುಸಕ್ಕರೆ, ರಸಕವಳ ಮತ್ತು ತಾರೆ ಎಲ್ಲಾ ಪದ್ಯ ಸಂಕಲನಗಳಲ್ಲಿರುವ ಪದ್ಯಗಳು "ಕಂದನ ಕಾವ್ಯ ಮಾಲೆ" ಪುಸ್ತಕದಲ್ಲಿವೆ. ಅದರಲ್ಲಿ ಒಟ್ಟು ನೂರು ಪದ್ಯಗಳಿವೆ...!! 
ಚಿಕ್ಕಂದಿನಲ್ಲಿ ಅವರ ತಾಯಿ ಇಟ್ಟ ಹೆಸರು ರಾಜ ಅಂತ. ಜಿ.ಪಿ.ರಾಜಯ್ಯಂಗಾರ್...ಹೇಗೆ ಜಿ.ಪಿ.ರಾಜರತ್ನಂ ಆದರು?? ಅನ್ನೋದು ಮಾತ್ರ ಬಹಳ ಸ್ವಾರಸ್ಯಮಯವಾದದ್ದು. ನೀವು ಅದನ್ನ ಓದಿಯೇ ಅನುಭವಿಸಬೇಕು :) ಅವರ ಹೆಸರನ್ನ ಅವರೇ ಇಟ್ಟುಕೊಳ್ಳುವ ಛಾನ್ಸು ಅದೆಷ್ಟು ಜನಕ್ಕೆ ದೊರೆತೀತು....!!! :)

---------
ಮೊನ್ನೆ "ಕಂದನ ಕಾವ್ಯ ಮಾಲೆ" ಪುಸ್ತಕದ ಪದ್ಯಗಳನ್ನ ಓದುವಾಗ....ಚಿಕ್ಕಂದಿನಲ್ಲಿ ಕಲಿತ ಪದ್ಯ...ಮತ್ತದರ ರಾಗ ಇನ್ನೂ ಮರೆತು ಹೋಗಿಲ್ಲದ್ದು ಕಂಡು ನನ್ನ ಹುಮ್ಮಸ್ಸು ಹಿಮ್ಮಡಿಯಾಗಿ....ಇನ್ನೂ ಜೋರಾಗಿ ಹಾಡಿಕೊಂಡದ್ದು ಬಹಳ ಖುಷಿ ಆಯ್ತು...!! :)
ನಾನು ಪದ್ಯದ ಒಂದೆರಡು ಸಾಲುಗಳನ್ನ ಬರೀತೇನೆ...ನೀವು ನಿಮ್ಮ ನೆನಪಿನಂಗಳದಿಂದ ನೆನಪಿಸಿಕೊಂಡು ಪದ್ಯಗಳನ್ನ ಪೂರ್ತಿಮಾಡಿ :) ನೋಡೋಣ ಯಾರಿಗೆ ಎಷ್ಟು ಪದ್ಯಗಳು ನೆನಪಿವೆ ಅಂತ..ಶುರು ಮಾಡೋಣಾ..

1. ತುತ್ತೂರಿ
ಬಣ್ಣದ ತಗಡಿನ ತುತ್ತೂರಿ ಕಾಸಿಗೆ ಕೊಂಡನು ಕಸ್ತೂರಿ
ಸರಿಗಮ ಪದನಿಸ ಊದಿದನು ಸನಿಧಪ ಮಗರಿಸ ಊದಿದನು
2. ಊಟದ ಆಟ
ಒಂದು ಎರಡು ಬಾಳೆಲೆ ಹರಡು । ಮೂರು ನಾಕು ಅನ್ನ ಹಾಕು ।
ಐದು ಆರು ಬೇಳೆ ಸಾರು । ಏಳು ಎಂಟು ಪಲ್ಯಕೆ ದಂಟು ।
ಒಂಬತ್ತು ಹತ್ತು ಎಲೆ ಮುದುರೆತ್ತು । ಒಂದರಿಂದ ಹತ್ತು ಹೀಗಿತ್ತು ಊಟದ ಆಟವು ಮುಗಿದಿತ್ತು ।।

3. ಹತ್ತು ಹತ್ತು ಇಪ್ಪತ್ತು
ಹತ್ತು ಹತ್ತು ಇಪ್ಪತ್ತು, ತೋಟಕೆ ಹೋದನು ಸಂಪತ್ತು
ಇಪ್ಪತ್ತು ಹತ್ತು ಮೂವತ್ತು, ಕೈಯಲಿ ಒಂದು ಕಲ್ಲಿತ್ತು ।।

ಮೂವತ್ತು ಹತ್ತು ನಲವತ್ತು, ಎದುರಲಿ ಮಾವಿನ ಮರವಿತ್ತು
ನಲವತ್ತು ಹತ್ತು ಐವತ್ತು, ಮರದಲಿ ಕಾಯಿ ತುಂಬಿತ್ತು ।।
ಐವತ್ತು ಹತ್ತು ಅರವತ್ತು, ಕಲ್ಲನು ಬೀರಿದ ಸಂಪತ್ತು|
ಅರವತ್ತು ಹತ್ತು ಎಪ್ಪತ್ತು, ಕಾಯಿಗಳೆಲ್ಲ ಉದುರಿತ್ತು ।।
ಎಪ್ಪತ್ತು ಹತ್ತು ಎಂಬತ್ತು, ಮಾಲಿಯ ಕಂಡನು ಸಂಪತ್ತು|
ಎಂಬತ್ತು ಹತ್ತು ತೊಂಬತ್ತು, ಕಾಲುಗಳೆರಡು ಓಡಿತ್ತು ।।

ತೊಂಬತ್ತು ಹತ್ತು ನೂರಾಯ್ತು, ತಲುಪಿದ ಮನೆಗೆ ಸಂಪತ್ತು ।।
4. ಗಡಿಯಾರದ ಸಡಗರ
ಕೋಳಿ ಕೂಗಿತೇಳು ಕಂದ....ಸೂರ್ಯ ಪೂರ್ವದಲ್ಲಿ ಬಂದ
ಹೆಚ್ಚು ಮಲಗಲೇನು ಚೆಂದ....ಬಾ ಕಂದ ಬಾ....
ಟಿಕ್ ಟಾಕ್ ಟಿಕ್ ಟಾಕ್...ಟಿಕ್ ಟಿಕ್ ಟಿಕ್
5. ವರ್ಷಕೆ ಆರೇ ಆರು ಋತು
ಚೈತ್ರ ವೈಶಾಖ ವಸಂತ ಋತು 
6. ಕಡಲೆ ಪುರಿ
ಪುರಿ ಪುರಿ ಕಡಲೆ ಪುರಿ ಗರಂ ಗರಂ ಕಡಲೆ ಪುರಿ
ಎಲ್ಲ ಬನ್ನಿ ತೆಗೆದು ತಿನ್ನಿ ಗರಂ ಗರಂ ಕಡಲೆ ಪುರಿ
ಕಾಸಿಗೊಂದು ಸೇರು ಪುರಿ... 
7. ನಮ್ಮ ಮನೆಯ ಸಣ್ಣ ಪಾಪ
ನಮ್ಮ ಮನೆಯಲೊಂದು ಸಣ್ಣ ಪಾಪನಿರುವುದು 
ಎತ್ತಿಕೊಳಲು ಹೋದರದಕೆ ಕೋಪ ಬರುವುದು....
8. ಚುಟುಕ
ಝಣ ಝಣ ಝಣ ಜೇಬು ತುಂಬ ಹಣ
ಮೇಲಕೆತ್ತಿ ಕೆಳಗೆ ಬಿಡಲು ಸದ್ದು....ಠಣ್ ಠಣ ಠಣ
9. ರೊಟ್ಟಿಯಂಗಡಿಯ ಕಿಟ್ಟಪ್ಪ
ರೊಟ್ಟಿಯಂಗಡಿಯ ಕಿಟ್ಟಪ್ಪ ನನಗೊಂದು ರೊಟ್ಟಿ ತಟ್ಟಪ್ಪ..
ಪುಟಾಣಿ ರೊಟ್ಟಿ ಕೆಂಪಗೆ ಸುಟ್ಟು ಒಂಬತ್ತು ಕಾಸಿಗೆ ಕಟ್ಟಪ್ಪ।।
10. ನಾಯಿಮರಿ ನಾಯಿಮರಿ
ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ?
ತಿಂಡಿ ಬೇಕು ತೀರ್ಥ ಬೇಕು ಎಲ್ಲ ಬೇಕು
ನಾಯಿ ಮರಿ ನಾಯಿ ಮರಿ ತಿಂಡಿ ತಿಂದು ಏನು ಮಾಡುವೆ?
ತಿಂಡಿ ತಿಂದು ಗಟ್ಟಿಯಾಗಿ ಮನೆಯ ಕಾಯುವೆ
ನಾಯಿ ಮರಿ ನಾಯಿ ಮರಿ ಕಳ್ಳಬಂದರೇನು ಮಾಡುವೆ?
ಲೋಳ್ ಲೋಳ್ ಬೌ ಎಂದು ಕೂಗಿಯಾಡುವೆ ।।

11. ಈ ಕತೆ
ಒಂದು ಕಾಡಿನ ಮಧ್ಯದೊಳಗೆ ಎರಡು ಮರಗಳ ನಡುವೆ ಮಲಗಿ
ಮೂರು ಕರಡಿಗಳಾಡುತಿದ್ದವು ನಾಲ್ಕು ಮರಿಗಳ ಸೇರಿಸಿ
12. ಒಂದು ಎರಡು
ಒಂದೆಂಬೋದು ಒಬ್ಬನೇ ಸೂರ್ಯ 
ಎರಡೆಂಬೋದೇನೆ ಹೆಸರ್ ಹೇಳೇ  
-----------

ನಾವು ಚಿಕ್ಕಂದಿನಲ್ಲಿ ಇನ್ನಷ್ಟು ಪದ್ಯಗಳನ್ನ ಹಾಡುತ್ತಿದ್ವಿ,ಯಾರು ಬರೆದದ್ದು ಅಂತ ಗೊತ್ತಿಲ್ಲ

ಬಸ್ ಬಂತು ಬಸ್ಸು ಗವರ್ಮೆಂಟ್ ಬಸ್ಸು
ಕೆಂಪು ಬಿಳಿಯ ಬಣ್ಣ ನೋಡು ಬಾರಣ್ಣ
ನಾನು ಡ್ರೈವರ್ ಆಗುವೆ
ನೀನು ಕಂಡಕ್ಟರ್ ಆಗುವೆ
ನೀನು ರೈಟ್ ಎಂದು ಹೇಳುವೆ
ನಾನು ಬಸ್ಸನ್ನು ಬಿಡುವೆ :)


ತೋಟಕೆ ಹೋಗೋ ತಿಮ್ಮ ತೋಳ ಬಂದೀತಮ್ಮ
ಹಸು ಮೇಯ್ಸೊ ತಿಮ್ಮ ಹಸು ಹಾದೀತಮ್ಮ
ಒಲೆ ಉರ್ಸೊ ತಿಮ್ಮ ಉರಿ ಸುಟ್ಟೀತಮ್ಮ
ಪಾಟ ಬರೆಯೊ ತಿಮ್ಮ ಬಳಪ ಇಲ್ಲವಮ್ಮ
ಹೂವು ಬಿಡ್ಸೊ ತಿಮ್ಮ ಹಾವು ಕಚ್ಚೀತಮ್ಮ
ಕಾವಲಿತಾರೊ ತಿಮ್ಮ ಕಾಲುನೋವುತ್ತಮ್ಮ
ನೀರು ಸೇದೊ ತಿಮ್ಮ ಕೈ ನೋವುತ್ತಮ್ಮ
ಊಟಕೆ ಬಾರೊ ತಿಮ್ಮ ಓಡಿಬರ್ತೀನಮ್ಮ :)

ಮಳೆ ಬಂತು ಮಳೆ
ಕೊಡೆ ಹಿಡಿದು ನಡೆ
ಜಾರಿ ಬಿದ್ದರಾಯ್ತು ನೋಡು
ಬಟ್ಟೆಯೆಲ್ಲ ಕೊಳೆ
ಸೋಪು ಹಾಕಿ ಒಗೆ
ನೊರೆ ಬಂತು ನೊರೆ
....ಮುಂದಿನ ಸಾಲುಗಳು ಮರೆತು ಹೋಗಿವೆ ನಿಮ್ಮಲ್ಲಿ ಯಾರಿಗಾದರೂ ನೆನಪಿದ್ರೆ ಬರೀರಿ... :)
----------
ಜಿ.ಪಿ.ರಾಜರತ್ನಂ ಬರೀ ಸಾಹಿತ್ಯಕ್ಕಷ್ಟೇ ಅಲ್ಲದೆ ಜೈನ ಮತ್ತು ಭೌದ್ಧ ಧರ್ಮದ ಅನೇಕ ಪುಸ್ತಕಗಳನ್ನ ಅನುವಾದ ಮಾಡಿದ್ದಾರೆ. ಪಾಳಿ ಭಾಷೆ ಕಲಿತು ಬೌದ್ಧ ಧರ್ಮದ ಅನೇಕ ಸೂತ್ರಗಳನ್ನ ಕನ್ನಡಕ್ಕೆ ಅನುವಾದಿಸಿದ್ದು ಸಾಧನೆಯೇ ಸರಿ. ಹೆಚ್ಚಿನ ವಿಚಾರಗಳಿಗೆ ಅವರ ಪುಸ್ತಕಗಳನ್ನ ಓದಿ. ಜೊತೆಗೆ ವಿಕಿಪೀಡಿಯದಿಂದ...
ಹಾಗೇ 'ಯೆಂಡ ಕುಡುಕ ರತ್ನ ಓದಿದವರಿಗೆ ರಾಜರತ್ನಂ ಸಕತ್ ಲೆವೆಲ್ ಕುಡುಕರು ಅನ್ನಿಸೇ ಅನ್ನಿಸುತ್ತೆ ಆದ್ರೆ ಅವ್ರು ಮಾತ್ರ ಕುಡೀತಿರ್ಲಿಲ್ಲ! :)
ಧನ್ಯವಾದಗಳು
ಸವಿತ