Monday, November 16, 2009

ಫ್ಲೈಯಿಂಗ್ ಸಾಸರ್



















ಯು.ಎಫ್.ಓ ಅಂದ್ರೆ unidentified flying object, ಅಪರಿಚಿತ ಹಾರಾಡುವ ವಸ್ತುಗಳು.. ಈ ಯು.ಎಫ್.ಓಗಳು ಆಕಾಶದಲ್ಲಿ ಟೀ ಸಾಸರುಗಳನ್ನ ಒಂದರ ಮೇಲೆ ಒಂದರಂತೆ ಬೋರಲಾಗಿ ಇಟ್ಟಂತೆ ಕಂಡದ್ರಿಂದ ಇವುಗಳಿಗೆ ಫ್ಲೈಯಿಂಗ್ ಸಾಸರ್ ಅಂತ ಕರೆದರು.

ತಟ್ಟೆಯಂತಿರುವ! ಸ್ವಯಂ ಬೆಳಕಿನಿಂದ ಕೂಡಿರುವ! ಅಪರಿಮಿತ ವೇಗದಲ್ಲಿ ಫೈಟರ್ ವಿಮಾನಗಳ ಕಣ್ಣಿಗೇ ಕಾಣದಂತೆ ಮಾಯವಾಗುವ ರೆಕ್ಕೆಗಳೇ ಇಲ್ಲದ ಹಾರುವ ಯಂತ್ರಗಳು!!ಯಾವುದೇ ಯಂತ್ರದ ಶಬ್ಧವೂ ಇಲ್ದೆ ನೆಲದಿಂದ ನೇರವಾಗಿ ಮೇಲಕ್ಕೇರುವ, ಹೊಗೆಯನ್ನೂ ಉಗುಳದೆ ಯಾವುದೇ ರೆಕ್ಕೆಗಳೇ ಇಲ್ಲದೆ ನಿಶ್ಯಭ್ದವಾಗಿ ಆಕಾಶದಲ್ಲಿ ಚಲಿಸುವ, ಅಲ್ಲೇ ನಿಶ್ಚಲವಾಗಿ ನಿಲ್ಲುವ ಮತ್ತು ನಿಂತಲ್ಲೇ ಗಂಟೆಗೆ ಎಂಟರಿಂದ…ಇಪ್ಪತ್ತು ಸಾವಿರ ಮೈಲುಗಳ ವೇಗದಲ್ಲಿ ಇದ್ದಕ್ಕಿದ್ದಂತೆ ಚಲಿಸುವ ಮತ್ತು ಅದೇ ವೇಗದಲ್ಲಿ ಎಡಕ್ಕೆ ಬಲಕ್ಕೆ ಹಿಂದಕ್ಕೆ ಮುಂದಕ್ಕೆ ಹಠಾತ್ತಾಗಿ ದಿಕ್ಕು ಬದಲಿಸುವ ಈ ಯು.ಎಫ್.ಓಗಳು ನಮ್ಮ ಪುರಾಣಗಳ ಮಂತ್ರಚಾಲಿತ ವಿಮಾನಗಳ ಕಲ್ಪನೆಗಳನ್ನೂ ಮೀರಿಸುವಂತಿವೆ!!

ಈ ಊಹಾತೀತ & ನಮ್ಮ ಭೌತ ನಿಯಮಗಳನ್ನೆಲ್ಲಾ ಮೀರಿದ ಈ ಫ್ಲೈಯಿಂಗ್ ಸಾಸರ್ಗಳು ನಿಜವಾದವೆ? ಅಥವಾ ಬರೀ ನಮ್ಮ ಕಲ್ಪನೆಯೇ?!

ತೇಜಸ್ವಿಯವರೇ ಹೇಳಿರೋ ಹಾಗೆ...ಯು.ಎಫ್.ಓಗಳ ಬಗ್ಗೆ ಓದುವಾಗ ಯು.ಎಫ್.ಓ ಇರುವಿಕೆಯನ್ನ ನಂಬಬೇಕೆ ಬೇಡವೇ ಎನ್ನುವ ಗೋಜಿಗೆ ಹೋಗದೆ ಸುಮ್ಮನೆ ಓದುತ್ತಾ ಹೋಗೋದು ಅವಶ್ಯಕ ಯಾಕಂದ್ರೆ ಯು.ಎಫ್.ಓ ಇರುವಿಕೆಯನ್ನ ನಂಬುವ ಇಲ್ಲ ನಂಬದಿರುವ ಕ್ರಿಯೆಯಲ್ಲಿಯೇ ನಮ್ಮ ಬುಧ್ಧಿಶಕ್ತಿಗೆ ಹೊಸ ಪ್ರಶ್ನೆಗಳು ಆಯಾಮಗಳು ಸಿಗುತ್ತವೆ. ನಂಬಿದ್ರೆ ಸಕತ್ ವಿಚಿತ್ರ ಸಂಗತಿಗಳು!! ನಂಬದಿದ್ದರೆ ನೂರೊಂದು ಪ್ರಶ್ನೆಗಳು!! :)

ಈ ಸಾಸರುಗಳೆಲ್ಲ ಒಂದು ದೊಡ್ಡ ಮಾತೃ ವಿಮಾನದಿಂದ ಬಂದು ಭೂಮಿಯ ವೀಕ್ಷಣೆ ನಡೆಸಿ ಪುನಃ ಹೋಗಿ ಮಾತೃ ವಿಮಾನವನ್ನ ಸೇರಿಕೊಳ್ಳುತ್ತವೆ. ಸಾಸರುಗಳ ಪ್ರಚಂಡ ವೇಗವನ್ನ ಗಮನಿಸಿದರೆ(ಗಂಟೆಗೆ ಎಂಟರಿಂದ ಇಪ್ಪತ್ತು ಸಾವಿರ ಮೈಲುಗಳ ವೇಗ!!!) ಅವು ಭೂಮಿಯ ಯಾವ ಭಾಗಕ್ಕೆ ಬೇಕಾದರೂ ಕ್ಷಣಾರ್ಧದಲ್ಲಿ ಹೋಗಿ ವೀಕ್ಷಣೆ ನಡೆಸಿ ಬರಬಹುದು.ಅವು ಒಮ್ಮೊಮ್ಮೆ ಏಕಾಂಗಿಯಾಗಿ, ಒಮ್ಮೊಮ್ಮೆ ಹಲವಾರು ಆಕಾಶದಲ್ಲಿ ಹಾರಾಡುತ್ತಾ ವೀಕ್ಷಣೆ ನಡೆಸಿವೆ. ಕೆಲವು ವೇಳೆ ಯುದ್ಧ ವಿಮಾನಗಳಂತೆ ವ್ಯೂಹ ರಚಿಸಿಕೊಂಡು ಅಪರಿಮಿತ ವೇಗದಲ್ಲಿ ಹೋಗೊದನ್ನ ಹಲವಾರು ಜನ ನೋಡಿದ್ದಾರಂತೆ.೧೯೫೦ರ ಆಸುಪಾಸಿನನಲ್ಲಿ ಸಾಸರ್ಗಳ ಹಾರಾಟ ಏಕೆ ಜಾಸ್ತಿಯಾಗ್ತಿದೆ ಅಂತ ಯಾರಿಗೂ ಗೊತ್ತಿಲ್ಲದಿದ್ದರೂ..ಅವು ಭೂಮಿಯ ಮೇಲೆ ಧಾಳಿ ಮಾಡಲು ಅಂತಿಮ ವೀಕ್ಷಣೆ ನಡೆಸುತ್ತಿದ್ದಂತೆ ತೋರುತ್ತಿದ್ವಂತೆ!!

ಹಲವಾರು ಸಲ ಈ ಹಾರುವ ಸಾಸರುಗಳನ್ನ ಜೆಟ್ ವಿಮಾನಗಳು ಬೆನ್ನತ್ತಿದಾಗ ಅವು ಮಿಂಚಿ ಮಾಯವಾಗಿವೆಯೇ ಹೊರತು ವಿಮಾನಗಳ ಮೇಲೆ ಎರಗುವುದಾಗಲಿ ದಾಳಿ ಮಾಡುವುದಾಗಲಿ ಮಾಡಿ ಆಕ್ರಮಣಶೀಲ ಪ್ರವೃತ್ತಿಯನ್ನ ತೋರಿಸಿಲ್ಲ....ಬ್ಲೂ ಬುಕ್ನ "ಮೆಂಟಲ್ ದುರಂತ”ದ ಹೊರತಾಗಿ. ಈ ದುರಂತಕ್ಕೆ ನಿಜವಾಗ್ಲೂ ಸಾಸರುಗಳೇ ಕಾರಣವೇ?!
ಈ ಆಕಾಶಯಂತ್ರಗಳ ಮೂಲ ಎಲ್ಲಿಯದು? ಇವುಗಳ ಚಲನವಲನಗಳು ಬುದ್ಧಿ ಅಥವಾ ಪ್ರಜ್ಞೆಯಿಂದ ನಿಯಂತ್ರಿತವಾದವೆ? ಅದನ್ನು ಯಾವ ಪ್ರಜ್ಞೆ ಹೇಗೆ ನಿಯಂತ್ರಿಸುತ್ತಿದೆ. ಅದು ಸಾಸರಿನೊಳಗೆ ಇದೆಯೋ ಅಥವಾ ಅವುಗಳನ್ನ ಇಲ್ಲಿಗೆ ತಂದು ಬಿಡುವ ಮಾತೃ ನೌಕೆಯೊಂದರಲ್ಲಿದೆಯೋ ಅಥವಾ ಲಕ್ಷಾಂತರ ಮೈಲುಗಳಾಚೆಯ ನಕ್ಷತ್ರ ಮಂಡಲದಲ್ಲಿದೆಯೋ?! ಇನ್ನೂ ಗೊತ್ತಾಗಿಲ್ಲ...

ಇಲ್ಲಿಯವರೆಗೂ ಫ್ಲೈಯಿಂಗ್ ಸಾಸರ್ಗಳೊಡನಾದ ಅನುಭವಗಳನ್ನ ಈ ಮೂರು ರೀತಿ ವಿಭಾಗಿಸಿದ್ದಾರೆ.
ಹಾರುವ ಸಾಸರುಗಳನ್ನ ಮನುಷರು ಹತ್ತಿರದಿಂದ ನೋಡಿದ್ದು ,ಅದರ ವಿವರಗಳು, ಅದಕ್ಕೆ ಮುಖಾಮುಖಿಯಾದಾಗ ಅದರ ವೇಗದ ಪರಿಣಾಮಗಳು, ಹೊಮ್ಮಿದ ಬೆಳಕಿನ ಸ್ವರೂಪ ಇತ್ಯಾದಿಗಳನ್ನ ಗಮನಿಸಿ ಹೇಳಿದ ಘಟನೆಗಳಿಗೆ "ಮೊದಲ ವರ್ಗದ ಮುಖಾಮುಖಿ" (Close encounter of the first kind) ಅಂತಾರೆ.

ಹಾರುವ ತಟ್ಟೆಗಳು ಭೂಮಿಗಿಳಿದ ಸಂಗತಿಗಳು, ಅವು ಭೂಮಿಯ ಮೇಲೆ ನಿಂತಾಗ ಮತ್ತು ಅಲ್ಲಿಂದ ಹಾರಿದಾಗ ಭೂಮಿಯ ಮೇಲೆ ಉಳಿದುಕೊಂಡ ಗುರುತುಗಳು ಅಥವಾ ಪರಿಣಾಮಗಳು ಇವು ಇರುವ ಘಟನೆಗಳನ್ನ ಎರಡನೇ ವರ್ಗದ ಹತ್ತಿರದ ಮುಖಾಮುಖಿ" (Close encounter of the second kind) ಅಂತಾರೆ.

ಭೂಮಿಗಿಳಿದ ಸಾಸರುಗಳಿಂದ ಮಾನವರನ್ನು ಹೋಲುವ ಜೀವಿಗಳು, ಯಂತ್ರ ಮಾನವರು ಅಥವಾ ಮನುಷ್ಯರೇ ಬಂದಿದ್ದು ಭೂಮಿಯ ಮನುಷ್ಯರೊಡನೆ ಮುಖಾಮುಖಿಯಾದುದು ಸಂವಾದಿಸಲು ಯತ್ನಿಸಿದ್ದು ಮುಂತಾದವುಗಳಿಗೆ ಮೂರನೇ ರೀತಿಯ ಮುಖಾಮುಖಿ(Close encounter of the third kind) ಅಂತಾರೆ.

ಎರಡನೇ ರೀತಿಯ ಮುಖಾಮುಖಿಗಿಂತಲೂ ಭಯ ಕಾತರ ಕುತೂಹಲ ಸಂದೇಹಗಳನ್ನ ಹುಟ್ಟಿಸುವುದು ಮೂರನೇ ರೀತಿಯ ಮುಖಾಮುಖಿ. ಅಲ್ಲಗಳೆಯಲಸಾದ್ಯವಾದಂತ ಸಾಕ್ಷಾಧಾರಗಳೊಂದಿಗೆ ನಿರೂಪಿತವಾಗಿರುವ ಈ ಕೆಲವು ಘಟನೆಗಳು ನಮ್ಮ ವಿಚಾರಶೀಲತೆಗೂ ವಿವೇಕಕ್ಕೂ ಸವಾಲುಗಳಾಗಿವೆ....
- ಇಟಲಿಯ ರಾವಿಯೋ ಹಳ್ಳಿಗೆ ಹೋದ ಸಂಶೋಧಕನಿಗೆ ಹಠಾತ್ತಾಗಿ ಇದಿರಾದ ಆಕಾಶಲೋಕದ ಕುಬ್ಜದಿಂದ ಆದ ಆಘಾತ!
- ದನ ಕಾಯುವ ಹುಡುಗ ಮೂಕನಂತಿದ್ದ ಮ್ಯಾಕ್ಸಿಮೊವನ್ನ ನೋಡಿ ತಾತ್ಸಾರದಿಂದ ಲೋಚಗುಟ್ಟಿದ ಆಕಾಶಕುಳ್ಳರು!
- ಅಮೆರಿಕಾದ ಹಾಪ್ಕಿನ್ಸ್ ವಿಲ್ಲಾದ ಎಂಟು ಜನರಿಗೆ ಸಾಸರಿನಿಂದ ಇಳಿದ ವಿಚಿತ್ರ ಜೀವಿಗಳು ಕಾಟ ಕೊಟ್ಟಿದ್ದು..
- ಬ್ರೆಜಿಲ್ನ ಹಳ್ಳಿರೈತ ಆಂಟೋನಿಯೋ ವಿಲ್ಲಾಸ್ ಬೋಸ್ ಆಕಾಶಲೋಕದ ಪ್ರೇಯಸಿಯೊಂದಿಗಿನ ಪ್ರಣಯ
- ಕೆನಡಾದ ಬೆಟ್ಟಿ ಮತ್ತು ಬೇರ್ನೆ ದಂಪತಿಗಳ ಜೀವನದಲ್ಲಿ ವಸ್ತುಗಳು ಕಳೆದು ಹೋದ ಹಾಗೆ... ಕೆಲವು ಘಂಟೆಗಳು ಕಳೆದು ಹೋಗಿದ್ದು ಹೇಗೆ? ಆ ಕಳೆದು ಹೋದ ಕಾಲದಲ್ಲಿ ಏನೇನು ರಹಸ್ಯಗಳಿದ್ದವು? ಅದನ್ನ ಪತ್ತೆ ಹಚ್ಚಿದ್ದು ಹೇಗೆ?
- ಇದಲ್ಲದೆ ಆಡಂ ಸ್ಕೀ ಆಕಾಶ ಯಾತ್ರಿಕರನ್ನು ಸಂಧಿಸಿ ಮಾತಾಡಲು ಯತ್ನಿಸಿದ ವೃತ್ತಾಂತ!
----------------------

ಪೂರ್ಣ ಚಂದ್ರ ತೇಜಸ್ವಿಯವರ ಫ್ಲೈಯಿಂಗ್ ಸಾಸರ್ಗಳ ಬಗೆಗಿನ ಎರಡು ಪುಸ್ತಕಗಳನ್ನ ಓದಿದ ಮೇಲೆ ಕತ್ತೆತ್ತಿ ಆಕಾಶ ವೀಕ್ಷಿಸಲು, ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳ ಬಗ್ಗೆ ತಿಳಿಯಲು ಕುತೂಹಲವಾಗಿದೆ...ದೂರ ಗ್ರಹಗಳ ಜೀವಿಗಳು ಭೂಮಿಗೆ ಬಂದಿಳಿಯಬಹುದೆಂಬ ಕಲ್ಪನೆಯೇ ವಿಸ್ಮಯ!!ಫ್ಲೈಯಿಂಗ್ ಸಾಸರ್ಗಳ ವಿಷಯವಾಗಿ ಎಷ್ಟೋ ಜನರ ಅನುಭವಗಳಿವೆ, ಪುಸ್ತಕಗಳಿವೆ, ಎಪ್ಪತ್ತಕ್ಕೂ ಹೆಚ್ಚಿನ ಸಿನೆಮಾಗಳಿವೆ!!

ತೇಜಸ್ವಿಯವರ "ಫ್ಲೈಯಿಂಗ್ ಸಾಸರ್" ಪುಸ್ತಕ ಮರೆಯಲಾರದಂತಹ ಒಂದು ಅನುಭವ.
ಅದು ನನಗೂ ದಕ್ಕಿದೆ. ನಿಮಗೂ ದಕ್ಕಲಿ ಎಂದು ಹಾರೈಸುವೆ. :)
ಆಕಾಶದಾಚೆಗಿನ ಅತಿಥಿಗಳ ಬರುವಿಕೆಯ ನಿರೀಕ್ಷೆ ನಿಮಗೂ ಇದೆಯೇ?!! :)
-ಸವಿತ

3 comments:

ಶಿವಶಂಕರ ವಿಷ್ಣು ಯಳವತ್ತಿ said...

ಇದರ ಬಗ್ಗೆ ನಾನೂ ಓದಿದೀನಿ...

ನಮ್ಮ ಲೆಕ್ಚರರ್ ಜೊತೆ ಬರೀ ಚರ್ಚೆಗಳೇ ಆಗಿದೆ..

ಒಟ್ಟಿನಲ್ಲಿ ಐನ್ ಸ್ಟೀನ್ ರವರ E=mc. square
ಫಾರ್ಮುಲಾನಾ ಫ್ಲೈಯಿಂಗ್ ಸಾಸರ್ಸ್ ಗಳ ಬಗ್ಗೆ ಹೋಲಿಕೆ ಮಾಡಲು ಯತ್ನಿಸಿದರೆ, ಫ್ಲೈಯಿಂಗ್ ಸಾಸರ್ಸ್ ಗಳು ಅಸ್ತಿತ್ವದಲ್ಲಿ ಇಲ್ಲಾ ಎಂದೆನಿಸುತ್ತದೆ.

ಇಂತಿ,
ಶಿವಶಂಕರ ವಿಷ್ಣು ಯಳವತ್ತಿ
http://shivagadag.blogspot.com

SavithaSR said...

ಪ್ರತಿಕ್ರಿಯೆಗೆ ಧನ್ಯವಾದಗಳು ಶಿವಶಂಕರ್,
ಫ್ಲೈಯಿಂಗ್ ಸಾಸರ್ಸ್ಗಳ ಚರ್ಚೆಯ ವಿಚಾರಗಳ ಬಗ್ಗೆ ತಿಳಿಯುವ ಕುತೂಹಲವಿದೆ..ಬರೆಯುವಿರಾ.
-ಸವಿತ

Anonymous said...

Good one ...

’ಫ್ಲೈಯಿಂಗ್ ಸಾಸರ್‍ಸ್’ಗಳು ಈ ಶತಮಾನದ ಪರಮರಹಸ್ಯಗಳಾಗಿವೆ. ಪಾಶ್ಚಿಮಾತ್ಯ ವಿಜ್ಞಾನಿಗಳ ಅತ್ಯುನ್ನತ ತನಿಖಾ ಮಂಡಲಿಗಳ ವಿಶ್ಲೇಷಣಗಳನ್ನು ಮಾರ್ಗಸೂಚಿಯನ್ನಾಗಿ ಇಟ್ಟುಕೊಂಡು ನಾನು ಈ ’ಫ್ಲೈಯಿಂಗ್ ಸಾಸರ್‍ಸ್’ಗಳ ಅನೇಕ ಘಟನೆಗಳನ್ನು ನಿಮ್ಮೆದುರು ಇಡುತ್ತಿದ್ದೇನೆ. ಇಲ್ಲಿರುವುವೆಲ್ಲ ಅತ್ಯುನ್ನತ ವಿಜ್ಞಾನಿಗಳ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಹೊರಬಂದವು. ಯಾವ ರೀತಿಯಿಂದಲೂ ಈವರೆಗೂ ಸುಳ್ಳೆಂದು ಸಾಧಿಸಲು ಅಸಾಧ್ಯವಾಗಿರುವಂಥವು.