Saturday, December 26, 2009

ಕಲಾ ದಿನ...

ದಿನ ನಿತ್ಯ ಮಾಡೋ ಕೆಲಸಗಳ ಹೊರತಾಗಿ ಆಗೀಗೊಮ್ಮೆ ಮಾಡುವ ಹೊಸ ರೀತಿಯ ಚಟುವಟಿಕೆಗಳು ಹೊಸತನ ತರುವುದರೊಂದಿಗೆ ನಮ್ಮನ್ನ ಕ್ರಿಯಾಶೀಲರನ್ನಾಗಿಸುತ್ತವೆ. ಸ್ಟ್ಯಾಗ್ನೆಂಟ್ ಅನಿಸುವಿಕೆ ಕಡಿಮೆಯಾಗುತ್ತೆ. ನನಗೆ ಈವತ್ತೊಂದು ಸಖತ್ ದಿನವಾಗಿತ್ತು.

ಮುಂದಿನ ತಿಂಗಳ ಚಿತ್ರ ಸಂತೆಯಲ್ಲಿ ನಾನು ಮತ್ತು ಪಾಲ ಭಾಗವಹಿಸಲು ತುಂಬಿದ ಅಪ್ಲಿಕೇಶನ್ನ ಚಿತ್ರ ಕಲಾ ಪರಿಷತ್ನಲ್ಲಿ ಕೊಟ್ಟು, ಅರಮನೆ ರಸ್ತೆ ಮೂಲಕ ಹಿಂತಿರುಗುತ್ತಿರುವಾಗ ಬಸ್ ಕಿಟಕಿಯಿಂದ ಕಂಡ "ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯದ (National Gallery of Modern Art)" ಹೊರಗಿನ ಚಿತ್ರಗಳು ಹಾಗೇ ಸೆಳೆದವು.ಅಲ್ಲೇ ಸ್ಟಾಪ್ ಕೊಟ್ಟಿದ್ದರಿಂದ ಮರು ಆಲೋಚಿಸದೆ ಬಸ್ಸಿಂದ ಕೆಳಗಿಳಿದು ಹೊರಟೆ. :)

ಪ್ರವೇಶ ದರ ೧೦ ರೂ. ಕ್ಯಾಮೆರಾದಿಂದ ಪೋಟೋ ತೆಗೆಯುವಂತಿಲ್ಲ ಕಣ್ಗಳ ಮೂಲಕ ತೆಗೆಯಬಹುದಷ್ಟೇ!!

ಒಳ ಹೋದಂತೆ ವಾವ್! ಕೋಣೆಯೊಳಗಿನ್ನೊಂದು ಮತ್ತೊಂದು ಮಗದೊಂದು ಕೋಣೆಗಳು!! ಪ್ರತಿ ಕೋಣೆಯೊಳಗೂ ಬೆರಗುಗೊಳಿಸುವ ರೇಖಾ,ಜಲ,ಆಯಿಲ್ ವರ್ಣ ಚಿತ್ರಗಳು!! ೧೮೫೦ ರಿಂದ ಈಗಿನವರೆಗಿನ ಹಲವಾರು ಕಲಾವಿದರ ಚಿತ್ರಗಳು. ಮೈಸೂರು ಶೈಲಿಯಿಂದ ಮಾಡ್ರನ್ ಆರ್ಟ್ವರೆಗೆ ಲೆಕ್ಕವಿರಿಸಲಾಗದಷ್ಟು ಕಲಾಕೃತಿಗಳು!! ನನಗಿಷ್ಟವಾದ ಕಲಾಕೃತಿಗಳ ಮತ್ತು ಕಲಾವಿದರ ಹೆಸರುಗಳನ್ನ ಟಿಕೇಟ್ ಹಿಂದೆ ಗೀಚಿಕೋಳ್ಳುತ್ತಾ ಹೋದೆ.:)

ರವೀಂದ್ರನಾಥ್ ಟ್ಯಾಗೋರ್,
ಅರಬಿಂದ ನಾಥ್ ಟ್ಯಾಗೋರ್,
ರಾಜಾ ರವಿವರ್ಮ,
ಶಾರ್ದಾ ಯುಕಿಲ್ ರ Chaitanya,
ಮಹದೇವನ್ ಮೆನನ್ ರ Cow Heards & Bamboo Grooves
ಎಮ್.ಎ.ಆರ್ ರ Omar Khayyam,
ಹೇಮ ಉಪಾಧ್ಯಾಯರ The Red End,
ಖೇಮ್ರಾಜ್ ರ Une Vie,
ಜಗದೀಶ್ ಚಂದರ್ ರವರ After Image II
ಸೋಹನ್ ಕದ್ರಿಯವರ Invocation,
ನಂದಲಾಲ್ ಬೋಸ್ ರ Chandilka,
ಅಮ್ರಿತಾ ಷೇರ್ಗಿಲ್ ರವರ Village Girl,
ಜಾಮಿನಿ ರಾಯ್ ರವರ Bengali Woman,
ಕೃಷ್ನಮಾಚಾರಿ,
ಹರ್ಶ,
ಮುಖುಲ್ ದೇ, 
.
.
.
.
.
.
ಎಣಿಸಲಾರದಷ್ಟು ಚಿತ್ರಗಳು!!! ಚೆಂದದ ಅನುಭವ

ಜೊತೆಗೆ ಸತ್ಯಜಿತ್ ರೇ ರವರ "ಸಿನೆಮಾ ಮೇಕಿಂಗ್" ಬದುಕಿನ ಹಲವಾರು ಪೋಟೋಗಳನ್ನ ನೋಡುವ ಅವಕಾಶ ಸಿಕ್ಕಿದ್ದು ಸಕತ್ ಖುಷಿಯಾಯ್ತು!!.ಸತ್ಯಜಿತ್ ರೇ ಬಗ್ಗೆ ಹೆಚ್ಚು ಗೊತ್ತಿರದಿದ್ದರೂ ಆ ಪೋಟೋಗಳಲ್ಲಿ ಅವರ ಮುಖದಲ್ಲಿ ಎದ್ದು ಕಾಣುವ "ಪ್ರತಿ ಕ್ಷಣವನ್ನೂ ಬಿಡದೆ ಬದುಕಿದ ತೀಕ್ಷ್ಣತೆ ಮತ್ತು ಆ ಪ್ಯಾಶನ್, ಮಾಡುವ ಕೆಲಸದಲ್ಲಿನ ಪರ್ಫೆಕ್ಟಿಸಮ್" ಹೆಚ್ಚು ಹಿಡಿಸಿತು. ಜೊತೆಗೆ ಅವರ ಸಿನೆಮಾಗಳನ್ನ ನೋಡುವ ಕುತೂಹಲವನ್ನೂ ಹುಟ್ಟಿಸಿದೆ.

ಈ ಆರ್ಟ್ ಗ್ಯಾಲರಿಯನ್ನ ಹಾಗೇ ಒಮ್ಮೆ ನೋಡಲು ಮಿನಿಮಮ್ ಅರ್ಧ ದಿನ, ವಿವರವಾಗಿ ನೋಡಲು ಒಂದು ದಿನ ಪೂರ್ತಿಯಾಗಿ ಬೇಕು. :) ನೀವು ನೋಡಲು ಮಾತ್ರ ಮಿಸ್ ಮಾಡಬೇಡಿ.


------------------------------------------------

ನಂತರ ಚರ್ಚ್ ಸ್ಟೀಟ್ನಲ್ಲಿನಲ್ಲಿನ ಪುಸ್ತಕದಂಗಡಿಗಳಲ್ಲಿ ಸುತ್ತಾಡಿ, ಹೈದರಾಬಾದ್ ಬಿರಿಯಾನಿ ಸವಿ ನೋಡಿ, ನಾಲ್ಕರ ಹೊತ್ತಿಗೆ ಮಿಡ್ಫ಼ೋರ್ಡ್ ರೋಡ್ ಕಡೆ ಪಯಣ.

ಈವತ್ತು ಜನಾರ್ಧನ ಸ್ವಾಮಿಯವರ (ಜೆ.ಸ್ವಾಮಿಯೆಂದು ಹೆಚ್ಚು ಪರಿಚಿತ) "ವ್ಯಂಗ್ಯ ಚಿತ್ರಗಳ" ಪ್ರದರ್ಶನ "Indian Institute of Cartoonists" ನಲ್ಲಿತ್ತು. ಬೆಳಗಿನ ಕಾರ್ಯಕ್ರಮಗಳೆಲ್ಲಾ ಬೆಳಗ್ಗೆಯೇ ಮುಗಿದಿದ್ದವು, ಲೇಟಾಗಿ ಹೋದದ್ದರಿಂದ ಆರಾಮಾಗಿ ನೋಡಿಕೊಂಡು ಬರಲಾಯ್ತು.ಬೆಳಗಿನ ಕಾರ್ಯಕ್ರಮದ ಕೆಲ ಪೋಟೋಗಳನ್ನ ನೋಡಲಿಕ್ಕೆ ಸಿಕ್ತು.


ಅವರು ಕಾಲೇಜಿನ ಸಮಯದಿಂದ ಈಗಿನವರೆಗೆ ರಚಿಸಿದ ಚೆಂದದ ವ್ಯಂಗ್ಯ ಚಿತ್ರಗಳು ಇಲ್ಲಿವೆ  
 

 

ಹಾಗೇ ಅಚಾನಕ್ಕಾಗಿ ಮತ್ತೊಂದು ಫೋಟೋದಲ್ಲಿದವರೊಬ್ಬರನ್ನ ಗುರುತಿಸಿದಾಗ ಸಖತ್ ಷಾಕ್!! ಜೊತೆಗೆ ಸಖತ್ ಸಂತಸವಾಯ್ತು!! :)ಸಂಜೆ ಮನೆಗೆ ವಾಪಸ್ ಬರುವಾಗ ಕ್ಲಿಕ್ಕಿಸಿದೊಂದು ಚಿತ್ರ :)ನನಗೆ ಈವತ್ತು ಒಂಥರಾ ಕಂಪ್ಲೀಟ್ "ಕಲಾ ದಿನ" ವಾಗಿತ್ತು. :)
ನಿಮ್ಮ ದಿನ ಹೇಗಿತ್ತು?! ತಿಳಿಸಿ :)

ಧನ್ಯವಾದಗಳು
ಸವಿತ :)

Saturday, December 12, 2009

ರೈಲು ಪ್ರಯಾಣ ಬರೀ 5,000 ಕಿ.ಮೀ....!!

ಮೊನ್ನೆ ನನ್ನ ದೊಡ್ಡಮ್ಮನ ಊರಿಗೆ ಹೋಗೋ ತಯಾರಿಯಲ್ಲಿದ್ದೆ..ಯಾವಾಗಲು ಬಸ್ಸಿನಲ್ಲೇ ಹೋಗೋ ನಾನು ಈ ಸಲ ರೈಲಿನಲ್ಲಿ ಹೋಗೋದು ಅಂತ ಡಿಸೈಡ್ ಮಾಡ್ದೆ..ಇಂತಾ ಚಿಕ್ಕ ವಿಚಾರದಲ್ಲಿ ಡಿಸೈಡ್ ಮಾಡೋದೇನಿದೆ ಅಂತೀರಾ!! ಇದೆ ಇಲ್ದೆ ಏನು?!!ಹಾಗೆ ವಿಚಾರ ಮಾಡಿದಾಗ... ನನಗೆ ನೆನಪಿರೋವಾಗಿಂದ ಈಗಿನವರೆಗೂ ಎಷ್ಟು ಪ್ರಯಾಣ ಮಾಡಿದ್ದೇನೆ ಅಂತ ಒಂದು ಅಂದಾಜು ಲೆಕ್ಕ ಹಾಕಿದೆ. ಅದರಲ್ಲಿ ಬಸ್ಸು, ವಿಮಾನ, ರೈಲಿನ ಅಂಕಿ ಅಂಶಗಳನ್ನ ಪಟ್ಟಿ ಮಾಡಿ ನೋಡಿದಾಗ...ನನಗೇ ಅಚ್ಚರಿಯೆನಿಸ್ತು..!!!

ಬಸ್ಸು - ಸುಮಾರು 80,000 ಕಿ.ಮೀ.ಗಳು,
ವಿಮಾನ - ಸುಮಾರು ಬಸ್ಸಿನ ಅರ್ದದಷ್ಟು ಕಿ.ಮೀ.ಗಳು
ರೈಲು - ಬರೀ 5,000 ಕಿ.ಮೀ.ಗಳಷ್ಟು!!?? ಅದರಲ್ಲೂ ನಮ್ಮದೇಶದಲ್ಲಿ ಒಂದು 3,000 ಕಿ.ಮೀಗಳಿರಬಹುದೇನೊ ಅಷ್ಟೆ...
ಬರೀ 3,000 ಕಿ.ಮೀ!!! ಅದ್ಯಾಕೋ ನನಗೆ ಒಂಥರಾ ಗಿಲ್ಟಿ ಫೀಲಾಯ್ತು...:( ಜೊತೆಗೆ ನಮ್ಮಮ್ಮ.."ಬಸ್ಸಿನಲ್ಲಿ ಬಹಳ ಓಡಾಡೋದು ಒಳ್ಳೇದಲ್ಲ"..ಸ್ವಿಚ್ ಓವರ್ ಟು ರೈಲು ಅಂತ :)

ಸರಿ ಇವೆಲ್ಲಾ ವಿಚಾರಗಳನ್ನ ನೆನಪಿನಲ್ಲಿಟ್ಟುಕೊಂಡು ಬೆಳಗ್ಗೆನೆ ಮೆಜಸ್ಟಿಕ್ ರೈಲ್ವೆ ಸ್ಟೇಷನ್ ಟಿಕೆಟ್ ಕೌಂಟರ್ನಲ್ಲಿ ಟಿಕೆಟ್ ತಗೊಂಡು..8 ಗಂಟೆಯ ಹುಬ್ಬಳ್ಳಿ ಪ್ಯಾಸೆಂಜರ್ ಟ್ರೈನ್ ಎಷ್ಟನೇ ಫ್ಲಾಟ್ ಫಾರಂ? ಅಂದಾಗ
...ಬಲಗಡೆ ಕೆಳಗೆ subway ಯಿಂದ ಹೋಗಿ ಅಂತ ಕೌಂಟರಿನೊಳಗಿಂದ ಹೆಣ್ಣುಮಗಳ ಉತ್ತರ ಬಂತು.
ಅಬ್ಬ ಅದೇನು subway ಅಂತೀರಾ!! : ( ವರ್ಣಿಸೋಕಾಗೋಲ್ಲ.!!

ಆಗ್ಲೇ ಒಂದು ರೈಲು ಬಂದು ನಿಂತಿತ್ತು..ಟೀ ಅಂಗಡಿಯವಂಗೆ ಕೇಳಿ ಕನ್ಫರ್ಮ್ ಮಾಡಿಕೊಂಡೆ. ಅಲ್ಲಿದ್ದ ಪ್ರಯಾಣಿಕರೆಲ್ಲಾ ರೈಲ್ವೆ ಬೋಗಿಯ ಬಾಗಿಲ ಬಳಿ ಮುಗಿಬಿದ್ದಿದ್ದರು...ಆದ್ರೆ ಬಾಗಿಲು ಇನ್ನು ತೆಗೆದಿರಲ್ಲಿಲ್ಲ!! ಅದ್ಯಾರೋ ಆಸಾಮಿ ತುರ್ತು ನಿಗಮದ ಕಿಟಕಿ ತೆರೆದು ಒಳಗೆ ತೂರಿ ಬಾಗಿಲು ತೆಗೆದೇ ಬಿಟ್ಟ...ನಾನು ಟೈಮ್ ಮತ್ತು ಜನರ ಗುಂಪನ್ನ ಒಮ್ಮೆ ನೋಡಿದೆ...ಇನ್ನು 7.35 ಆರಾಮಾಗಿ ಕುಳಿತರೂ ಅರ್ಧ ಕಂಪಾರ್ಟ್ಮಮೆಂಟ್ ತುಂಬೊವಷ್ಟು ಜನ...ಆಗ್ಲೇ ಜನರು ಕಿಟಕಿ ಬಳಿ ಹೋಗಿ ಟವೆಲ್/ಕರ್ಚಿಪ್ ಹಾಕ್ತಿದ್ರು.. ಜನ ಮರುಳೋ ಜಾತ್ರೆ ಮರುಳೋ ಗೊತ್ತಾಗ್ಲಿಲ್ಲ :D ನಾನು ಕಿಟಕಿ ಹತ್ತಿರದ ಒಂದು ಸೀಟಲ್ಲಿ ಕುಳಿತೆ...ಮೂರ್ನೆ ಬಾರಿಯ ಪ್ಯಾಸೆಂಜರ್ ಟ್ರೈನ್ ಅನುಭವ...ಬಹಳ ಹುಮ್ಮಸ್ಸಿತ್ತು..ಜನ ಬರ್ತಾ ಇದ್ರೂ ಹೋಗ್ತಾ ಇದ್ರೂ...8 ಗಂಟೆಗೆ ರೈಲು ಹೊರಟಿತು...

ಊರು ಬಿಟ್ಟಂತೆಲ್ಲಾ...ಕಿಟಕಿ ಹೊರಗೆ ಹಸಿರು ಹೊಲ ಗದ್ದೆ ತೋಟಗಳು ಶುರುವಾಯ್ತು...ಒಳಗೆ ಜಾಹೀರಾತುಗಳು!!
ಹೌದು...ಜಾಹೀರಾತುಗಳು ಟೀವೀಲಲ್ಲ...ಕಂಪಾರ್ಟ್ಮಮೆಂಟ್ ಒಳಗೆ!! :)
ಮೊದಲು ನ್ಯೂಸ್ ಪೇಪರ್ನವ,
ನಂತರ ಮಲ್ಲಿಗೆ ಇಡ್ಲಿಯವ,
ಕಾಫಿ ಟೀಯವ,
ಬಂಗಾರದ ಬಣ್ಣದ ಸರ ಮಾರುವವ,
ಟಾರ್ಚ್ ಇರೋ ಕೀಚೈನ್ ಮಾರುವವ,
ಹತ್ತಕ್ಕೆ ಮೂರು ಪೆನ್ನು ಮಾರುವವ,
ಬಿಡಿ ಮಲ್ಲಿಗೆ, ಕನಕಾಂಬರ ಮಾರೋ ಹೂವಾಡಗಿತ್ತಿ,
ಬಾಟಲಿ ನೀರಿನವ,
ಕತ್ತರಿಸಿದ ಸೌತೆ ಕಾಯಿ ಮಾರುವವ,
ಕಂಕುಳಲ್ಲಿ ಕೂಸನ್ನಿಟ್ಟ್ಕೊಂಡು "ನಮ್ಮ ಮನೆಯಲಿ ದಿನವೂ ದಿನವೂ ಚೈತ್ರವೇ" ಹಾಡೇಳಿದ ಹೆಣ್ಮಗಳು,
ಬಾದಾಮಿ ಹಾಲಿನವ,
ದೋಸೆ ಚಿತ್ರಾನ್ನದವ,
ಬಿಸ್ಕತ್ತು,ಪೆಪ್ಸಿಯವ,
ರೈಲಿನ ನೆಲ ಒರೆಸಿ ಚಿಲ್ಲರೆ ಕೇಳೋ ಚಿಕ್ಕ ಹುಡುಗ,
ಬಿಸಿ ಬಿಸಿ ಕಡಲೆ ಪೂರಿಯವ,
ಲೇಸ್,ಕುರ್ಕುರೆಯವ,
ಹುರಿದ/ಬೇಯಿಸಿದ ಸೇಂಗಾ ಮಾರೋ ಅಜ್ಜಿ,
ಕಣ್ಣು ಕಾಣಿಸದವ..
ಟಿಕೆಟ್ ಚೆಕ್ ಮಾಡುವವ,
...........................................
ಹೀಗೆ ನೆನಪಿಡಲಾರದಷ್ಟು ಜನಗಳು...ಜಾಹೀರಾತುಗಳು,ವ್ಯಾಪಾರಗಳು,ದಾನ ಧರ್ಮಗಳು....!!!
ನನಗಂತೂ ನೋಡಿ ನೋಡಿ ಕಣ್ಣುಗಳು ಭಾರವೆನಿಸತೊಡಗಿದವು..ನಿದ್ದೆಗೆ ಜಾರೋ ಮುನ್ನ ಒಂದಷ್ಟು ಫೋಟೋ ಕ್ಲಿಕ್ಕಿಸಿದ್ದಾಯ್ತು.

ಕೊನೆಗೆ ನಮ್ಮ ಟ್ರೈನ್ ನಿಂತಾಗ ಪಕ್ಕದಲ್ಲೇ ಮತ್ತೊಂದು ಟ್ರೈನ್ ಹೋಯಿತು... ಆ ಕ್ಷಣ ಭೌತ ಶಾಸ್ತ್ರದ ಚಲನೆಯ ನಿಯಮಗಳ ನೆನಪಾಯ್ತು...!ಓಡುತ್ತಿದ್ದ ಆ ರೈಲಿನ ಕಿಟಕಿ ಬಳಿ ಕುಳಿತ ಜನರು..ಅವರ ಹಾವ ಭಾವಗಳು...ಸರ್ರನೆ ಸಿನೆಮಾ ರೀಲೊಂದನ್ನ ಓಡಿಸಿ ತೋರಿಸಿದಂತಿತ್ತು :)

ಯಾಕೋ ನನ್ನ ರೈಲು ಪ್ರಯಾಣದ ಅಂಕಿ ಅಂಶಗಳು ಹೆಚ್ಚಾಗೋದು ಕಷ್ಟವೆನಿಸುತ್ತಿದೆ...!! :(
 ಅದಿರ್ಲಿ ನಿಮ್ಮ ಪ್ರಯಾಣದ ಅಂಕಿ ಅಂಶಗಳನ್ನ ಲೆಕ್ಕ ಹಾಕಿದ್ದೀರಾ?!! :)
-ಸವಿತ