Saturday, January 29, 2011

ದೃಷ್ಟಿ/ಕಣ್ಣು ಆಸರೆ ಅಂದ್ರೇನು?

ನಮ್ಮನೆಗೆ ನಮ್ಮ ಪುಟಾಣಿ ಮಗಳನ್ನ ನೋಡಲು ಯಾರಾದ್ರು ನೆಂಟರು, ಸ್ನೇಹಿತರು ಬಂದು ಹೋದರೆ ಸಾಕು ಸಂಜೆ ಹೊತ್ತಿಗೆ ಮಗಳು ಒಂದೇ ಸಮ ಅಳಲು ಶುರುಮಾಡಿದರೆ ನಿಲ್ಲಿಸಲಾಗದು. ಆಕೆಗೆ "ಕಣ್ಣಾಸರೆಯಾಗಿದೆ" ಅಂತ ನಮ್ಮಮ್ಮ " ಉಪ್ಪು, ವೀಳ್ಯದೆಲೆ, ಅನ್ನ,ಮೆಣಸಿನಕಾಯಿ, ಹರಿಶಿಣ, ಕೆಂಡ, ನೀರು" ಉಪಯೋಗಿಸಿ ಅವರು ಕಲಿತ ರೀತಿಯಲ್ಲಿ ದೃಷ್ಟಿ ತೆಗೆಯುತ್ತಾರೆ. ನಂತರ ಮಗಳು ನೆಮ್ಮದಿಯಾಗಿ ಮಲಗುತ್ತಾಳೆ. ಈ ಪ್ರಕ್ರಿಯೆಯನ್ನ ಕಳೆದ ತಿಂಗಳಿನಿಂದ ಸುಮಾರು ಸಲ ನೋಡ್ತಾ ಇದರ ಬಗ್ಗೆ ಅನೇಕ ಪ್ರಶ್ನೆಗಳು ಮೂಡಿವೆ.
 
1. ದೃಷ್ಟಿ/ಕಣ್ಣು ಆಸರೆ ಎಂದರೇನು?
2. ಕಣ್ಣು ಆಸರೆ ಹೇಗೆ ಆಗತ್ತೆ? ಏಕೆ ಆಗತ್ತೆ?
3. ದೃಷ್ಟಿ ತೆಗೆಯುವಿಕೆಯ ವಿಧಾನಗಳೇನು?
4. ಉಪ್ಪು, ವೀಳ್ಯದೆಲೆ, ಅನ್ನ,ಮೆಣಸಿನಕಾಯಿ, ಹರಿಶಿಣ, ಕೆಂಡ, ಬೂದಗುಂಬಳಕಾಯಿ, ನಿಂಬೆ ಹಣ್ಣು ಇವುಗಳು ಹೇಗೆ ದೃಷ್ಟಿಯನ್ನ ತೆಗೆಯುತ್ತವೆ? ಈ ಪದಾರ್ಥಗಳಲ್ಲಿ ಅಂತಹ ಯಾವ ವಿಶಿಷ್ಟ ಗುಣಗಳಿವೆ?

ಮೊದಲೆರಡು ಪ್ರಶೆಗಳಿಗೆ ನನಗೆ ತಿಳಿದದ್ದು... 
ನಮ್ಮ ಸೂಕ್ಷ್ಮ ಶರೀರದದಲ್ಲಿರುವ ಏಳು ಚಕ್ರಗಳು- ಸಹಸ್ರಾರ, ಆಜ್ಞಾ, ವಿಶುದ್ಧ, ಅನಾಹತ, ಮಣಿಪೂರ, ಸ್ವಾಧಿಸ್ಠಾನ, ಮೂಲಾಧಾರ. ಪ್ರತಿ ಚಕ್ರದಲ್ಲಿ ದೇಹಕ್ಕೆ ಸಾಕಾಗುವಷ್ಟು ಶಕ್ತಿ ಸಂಗ್ರಹವಾಗಿರುತ್ತದೆ. ಚಿಕ್ಕ ಮಕ್ಕಳಲ್ಲಿ ಎಲ್ಲಾ ಚಕ್ರಗಳು ತೆರೆದಿರೋದ್ರಿಂದ ಶಕ್ತಿಯ ಸಂಚಲನೆ ತುಂಬಾ ಸಲೀಸು. ಅಂದರೆ ಹೊರಗಿನಿಂದ ಬರುವ ಹೆಚ್ಚಿನ ಶಕ್ತಿಯನ್ನ ಸಂಗ್ರಹಿಸುವ/ಇರುವ ಶಕ್ತಿಯನ್ನ ಕ್ಷೀಣಿಸಿಕೊಳ್ಳುವ ಪ್ರಕ್ರಿಯೆ ಯಾವುದೇ ಅಡೆ ತಡೆಯಿಲ್ಲದೆ ನಡೆಯುತ್ತದೆ.

ಯಾರಾದ್ರೂ ಮಗುವನ್ನ ನೋಡಿ ಸಂತಸದಿಂದ "ವಾವ್! ಆ ಮಗು ಎಷ್ಟು ಮುದ್ದಾಗಿದೆ" ಅನ್ನೋ ಗುಣಾತ್ಮಕ ಶಕ್ತಿಯನ್ನ ವರ್ಗಾಯಿಸಿದಾಗ ಈ ಹೆಚ್ಚಿನ ಶಕ್ತಿಯನ್ನ ಸಂಗ್ರಹಿಸಿಕೊಂಡು ಮಗುವಿನ ಸೂಕ್ಷ್ಮ ಶರೀರದದಲ್ಲಿ ಆಗುವ ಶಕ್ತಿಯ ಅಸಮತೋಲನೆಯಿಂದ ದೇಹ ಪ್ರತಿಕ್ರಿಯಿಸುವ ರೋಧನೆಯೇ ದೃಷ್ಟಿ.

ಬೇಜಾರಿನಿಂದ "ಛೇ! ಆ ಮಗು ಲಕ್ಷಣವಾಗೇ ಇಲ್ವಲ್ಲ" ಅಂದಾಗ ಈ ನಕಾರಾತ್ಮಕತೆ ಚಕ್ರದಲ್ಲಿ ಇರುವ ಶಕ್ತಿಯನ್ನ ಕ್ಷೀಣಿಸುವಿಕೆಯಿಂದ ಕೂಡಾ ಅಸಮತೋಲನೆ ಆಗತ್ತೆ.
ಇದು ನಾನು ನನ್ನದೇ ಆದ ರೀತಿಯಲ್ಲಿ ಅರ್ಥೈಸಿಕೊಂಡಿರೋದು :) ಎಷ್ಟು ಸರಿ ಅಂತ ಗೊತ್ತಿಲ್ಲ. ಇದರ ಬಗ್ಗೆ ನಿಮ್ಮ ವಿಚಾರಗಳೇನು ತಿಳಿಸಿ.

ಮೇಲಿನವಷ್ಟು ಮನುಷ್ಯರಿಗೆ ಸಂಬಂಧ ಪಟ್ಟಂತ ಪ್ರಶ್ನೆಗಳು. ಇನ್ನು ವಸ್ತುಗಳ ಬಗ್ಗೆ.....ಹೊಸ ಮನೆ, ಹೊಸ ಗಾಡಿಯನ್ನ ಕೊಂಡಾಗ ಕೂಡ ದೃಷ್ಟಿಯಾಗದಿರಲೆಂದು ಬೂದಗುಂಬಳಕಾಯಿಯನ್ನ ನಿವಾಳಿಸಿ ಒಡೆಯುತ್ತಾರೆ ಮತ್ತು ನಿಂಬೆ ಹಣ್ಣನ್ನ ಉಪಯೋಗಿಸುತ್ತಾರಲ್ವಾ. ವಸ್ತುಗಳಿಗೆ ಹೇಗೆ ದೃಷ್ಟಿಯಾಗುತ್ತದೆ?

ಗೂಗಲಿಸಿ ನೋಡಿದೆ ಇದರ ಬಗ್ಗೆ ಯಾವ ವಿಚಾರಗಳು ಸಿಗಲಿಲ್ಲ, ಅದಕ್ಕೇ ಈ ಬರಹ :) ವೈಜ್ಞಾನಿಕವಾಗಿ ಈ ವಿಚಾರಗಳ ಬಗ್ಗೆ ನಿಮಗೆ ಗೊತ್ತಿದ್ದರೆ ದಯವಿಟ್ಟು ಹಂಚಿಕೊಳ್ಳಿ.
ಧನ್ಯವಾದಗಳು
ಸವಿತ ಎಸ್ ಆರ್

Monday, January 24, 2011

ಮಜ್ಜಿಗೆ ಹುಳಿ/ಸಾರು/ಖಾರ/ಖಡಿ

ಈವತ್ತು ಆಂಧ್ರ ಶೈಲಿಯಲ್ಲಿ ಮಜ್ಜಿಗೆ ಹುಳಿ(ಮಜ್ಜಿಗ ಪುಲುಸು) ಮಾಡುವುದನ್ನ ನಮ್ಮತ್ತೆ ಹೇಳಿಕೊಟ್ಟರು, ಇಂದೇ ಮಾಡಿ...ಕಲಿತದ್ದು ಮರೆತು ಹೋಗದಿರಲೆಂದು ಬರೆದುಕೊಂಡ ಬರಹವಿದು :)

ಅತ್ತೆ ಮಾಡುವ ಮಜ್ಜಿಗೆ ಹುಳಿ(ಮಜ್ಜಿಗ ಪುಲುಸು)

ಬಳಸುವ ಪದಾರ್ಥಗಳು:
1/2 ಲೀಟರ್ ಮಜ್ಜಿಗೆ(ಹುಳಿಯಾಗಿದ್ದರೆ ಓಕೆ, ತುಂಬಾ ನೀರಾಗಿರಬಾರದು)
ಒಗ್ಗರೆಣೆಗೆ: 1-2 ಚಮಚ ಎಣ್ಣೆ,ಸಾಸಿವೆ, ಒಂದು ಚಿಟಿಕೆ ಹಿಂಗು, 2 ಎಸಳು ಕರಿಬೇವಿನ ಎಲೆ, ಒಂದು ಈರುಳ್ಳಿ (ಸಣ್ಣಗೆ ಹೆಚ್ಚಿದ್ದು)
ಉಪ್ಪು ರುಚಿಗೆ ತಕ್ಕಷ್ಟು
ಕುಂಬಳಕಾಯಿ: ನಿಮಗೆ ಬೇಕಾದ ಗಾತ್ರ, ಆಕಾರಕ್ಕೆ ಕತ್ತರಿಸಿಕೊಂಡು, ಪಾತ್ರೆಗೆ ನೀರು,ಸ್ವಲ್ಪ ಉಪ್ಪು ಹಾಕಿ ಕುಂಬಳಕಾಯಿಯನ್ನ ಬೇಯಿಸಿಕೊಳ್ಳಿ.

ರುಬ್ಬಿಕೊಳ್ಳಲು:
ಒಂದು ಚಮಚ ಅಕ್ಕಿ ಮತ್ತು ಒಂದೂವರೆ ಚಮಚ ಕಡಲೆ ಬೇಳೆಯನ್ನ ನೀರಲ್ಲಿ ಹಾಕಿ 2 ಗಂಟೆಗಳವರೆಗೆ ನೆನೆಸಿಡಿ
4 ಹಸಿಮೆಣಸಿನ ಕಾಯಿ (ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಮೆಣಸಿನಕಾಯನ್ನ ಹುರಿದುಕೊಳ್ಳಿ)
ಸ್ವಲ್ಪ ಹಸಿ ಶುಂಠಿ
1/4  ಚಮಚ ಹರಿಸಿಣ ಪುಡಿ
1/2 ಚಮಚ ಜೀರಿಗೆ
ಸ್ವಲ್ಪ ಕೊತ್ತಂಬರಿ ಸೊಪ್ಪು(ಅಲಂಕಾರಕ್ಕೆ)
   
ಮಾಡುವ ವಿಧಾನ:
ಮೇಲೆ ರುಬ್ಬಿಕೊಳ್ಳಲು ಹೇಳಿದ ಪದಾರ್ಥಗಳನ್ನ ಚೆನ್ನಾಗಿ ನುಣ್ಣಗೆ ರುಬ್ಬಿಕೊಂಡು ಅದನ್ನ ಮಜ್ಜಿಗೆಯೊಂದಿಗೆ ಬೆರೆಸಿಡಿ
ಒಗ್ಗರಣೆ:
ಪಾತ್ರೆಗೆ 1-2 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಾದ ನಂತರ ಸಾಸಿವೆ, ಹಿಂಗು, ಕರಿಬೇವಿನ ಎಲೆ, ಈರುಳ್ಳಿ ಹಾಕಿರಿ. ಈರುಳ್ಳಿ ಸ್ವಲ್ಪ ಕೆಂಪಗಾದ ಮೇಲೆ ಅದಕ್ಕೆ ಮಜ್ಜಿಗೆಯ ಮಿಶ್ರಣವನ್ನ ನಿಧಾನವಾಗಿ ಸುರಿಯಿರಿ. ಆ ಮಿಶ್ರಣವನ್ನ ಸೌಟಿನಲ್ಲಿ ನಿಧಾನವಾಗಿ ಕದಡುತ್ತಿರಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಒಂದು ಕುದಿ ಬಂದಮೇಲೆ ಬೇಯಿಸಿಕೊಂಡ ಕುಂಬಳಕಾಯಿಯನ್ನ ಅದಕ್ಕೆ ಹಾಕಿ ಇನ್ನಷ್ಟು ಹೊತ್ತು ಕುದಿಸಿ. ಕೊನೆಗೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನ ಮೇಲೆ ಹಾಕಿದರೆ ಮಜ್ಜಿಗೆ ಹುಳಿ(ಮಜ್ಜಿಗ ಪುಲುಸು) ರೆಡಿ.

ಮಾಡಿದೊಡನೆ ಖಾಲಿಯಾದ್ದರಿಂದ ಪೋಟೋ ತೆಗೆದುಕೊಳ್ಳಲು ಸಾಧ್ಯವಾಗಲ್ಲಿಲ್ಲ :( ಮತ್ತೊಮ್ಮೆ ಹಾಕುವೆ :)
----------------------------------------------------------------------------------
ಹಾಗೇ ಇದೇ ಮಜ್ಜಿಗೆ ಹುಳಿಯನ್ನ ನಮ್ಮಮ್ಮ ಮತ್ತು ಪಕ್ಕದ ಮನೆ ಅಜ್ಜಿ ಬೇರೆ ವಿಧಾನದಲ್ಲಿ ಮಾಡುತ್ತಾರೆ.

ಅಮ್ಮ ಮಾಡುವ ಮಜ್ಜಿಗೆ ಸಾರು:
ಬಳಸುವ ಪದಾರ್ಥಗಳು:
1/2 ಲೀಟರ್ ಮಜ್ಜಿಗೆ(ಹುಳಿಯಾಗಿದ್ದರೆ ಓಕೆ, ತುಂಬಾ ನೀರಾಗಿರಬಾರದು)
ಒಗ್ಗರೆಣೆಗೆ: 1-2 ಚಮಚ ಎಣ್ಣೆ,ಸಾಸಿವೆ, ಒಂದು ಚಿಟಿಕೆ ಹಿಂಗು, 2 ಎಸಳು ಕರಿಬೇವಿನ ಎಲೆ, ಒಂದು ಈರುಳ್ಳಿ (ಸಣ್ಣಗೆ ಹೆಚ್ಚಿದ್ದು)
ಉಪ್ಪು ರುಚಿಗೆ ತಕ್ಕಷ್ಟು
ರುಬ್ಬಿಕೊಳ್ಳಲು: 1 ಚಮಚ ಖಾರದಪುಡಿ,1/2 ಚಮಚ  ಜೀರಿಗೆ,5 ಹೋಳು ಬೆಳ್ಳುಳ್ಳಿ,1/4 ಚಮಚ ಹರಿಸಿಣ ಪುಡಿ,ಸ್ವಲ್ಪ ಕೊತ್ತಂಬರಿ ಸೊಪ್ಪು,3 ಚಮಚ ತೆಂಗಿನ ಕಾಯಿ,2 ಚಮಚ ಹುರಿಗಡಲೆ

ಮಾಡುವ ವಿಧಾನ:
ಮೇಲೆ ರುಬ್ಬಿಕೊಳ್ಳಲು ಹೇಳಿದ ಪದಾರ್ಥಗಳನ್ನ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ.
ಒಗ್ಗರಣೆ:
ಪಾತ್ರೆಗೆ 1-2 ಚಮಚ ಎಣ್ಣೆ ಹಾಕಿ ಚೆನ್ನಾಗಿ ಕಾದ ನಂತರ ಸಾಸಿವೆ, ಹಿಂಗು, ಕರಿಬೇವಿನ ಎಲೆ, ಈರುಳ್ಳಿ ಹಾಕಿರಿ. ಈರುಳ್ಳಿ ಸ್ವಲ್ಪ ಕೆಂಪಗಾದ ಮೇಲೆ ಅದಕ್ಕೆ ರುಬ್ಬಿಕೊಂಡ ಮಿಶ್ರಣವನ್ನ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಒಂದು ಕುದಿ ಬಂದಮೇಲೆ ಮಜ್ಜಿಗೆಯನ್ನ ಹಾಕಿ ಕುದಿಸಿದರೆ ಮಜ್ಜಿಗೆ ಸಾರು ರೆಡಿ :) ಶೀತ,ಗಂಟಲು ನೋವು ಬಂದಾಗ ಈ ಮಜ್ಜಿಗೆ ಸಾರನ್ನ ಅಮ್ಮ ಜಾಸ್ತಿ ಮಾಡ್ತಾರೆ :)
--------------------------------------------------------------------------------
ಅಮ್ಮ ಮಾಡುವ ಮೊಸರಿನ ಖಾರ:
ಬಳಸುವ ಪದಾರ್ಥಗಳು:
1/2 ಲೀಟರ್ ಮೊಸರು (ಹುಳಿಯಾಗಿದ್ದರೆ ಓಕೆ)
ಒಗ್ಗರೆಣೆಗೆ: 1-2 ಚಮಚ ಎಣ್ಣೆ,ಸಾಸಿವೆ, ಒಂದು ಚಿಟಿಕೆ ಹಿಂಗು, 2 ಎಸಳು ಕರಿಬೇವಿನ ಎಲೆ, ಒಂದು ಈರುಳ್ಳಿ (ಸಣ್ಣಗೆ ಹೆಚ್ಚಿದ್ದು)
ಉಪ್ಪು ರುಚಿಗೆ ತಕ್ಕಷ್ಟು
ಉಪ್ಪಿನ ನೀರಲ್ಲಿ ಬೇಯಿಸಿದ ಕುಂಬಳಕಾಯಿಯ ಹೋಳುಗಳು
ರುಬ್ಬಿಕೊಳ್ಳಲು: 4-5 ಹಸಿ ಮೆಣಸಿನ ಕಾಯಿ,1/2 ಚಮಚ ಜೀರಿಗೆ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ತೆಂಗಿನ ಕಾಯಿ, 1/4 ಚಮಚ ಹರಿಸಿಣ ಪುಡಿ 

ಮಾಡುವ ವಿಧಾನ:
ಮೇಲೆ ರುಬ್ಬಿಕೊಳ್ಳಲು ಹೇಳಿದ ಪದಾರ್ಥಗಳನ್ನ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ.
ಒಗ್ಗರಣೆಗೆ: ಪಾತ್ರೆಯಲ್ಲಿ 1 ಚಮಚ ಎಣ್ಣೆ ಹಾಕಿ,ಕಾದ ಮೇಲೆ ಸಾಸಿವೆ, ಜೀರಿಗೆ,ಹಿಂಗು, ಕರಿಬೇವಿನ ಎಲೆ, ಈರುಳ್ಳಿ ಹಾಕಿರಿ.ಈರುಳ್ಳಿ ಸ್ವಲ್ಪ ಕೆಂಪಗಾದ ಮೇಲೆ ಅದಕ್ಕೆ ರುಬ್ಬಿಕೊಂಡ ಮಿಶ್ರಣ ಮತ್ತು ಬೇಯಿಸಿದ ಕುಂಬಳಕಾಯಿಯ ಹೋಳುಗಳನ್ನ ಹಾಕಿ,ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಒಂದು ಕುದಿ ಕುದಿಸಿರಿ.
ನಂತರ ಅದು ತಣ್ಣಗಾದ ನಂತರ ಮೊಸರನ್ನ ಹಾಕಿ ಕದಡಿದರೆ ಮೊಸರಿನ ಖಾರ ರೆಡಿ :)
------------------------------------------------------------------------------
ಪಕ್ಕದ ಮನೆ ಅಜ್ಜಿ ಮಾಡುವ ಮೊಸರಿನ ಖಡಿ:
ಬಳಸುವ ಪದಾರ್ಥಗಳು: 
2 ಚಮಚ ಕಡಲೆ ಹಿಟ್ಟು(ನೀರಿನಲ್ಲಿ ಕದಡಿಟ್ಟುಕೊಳ್ಳಿ), 1/4 ಚಮಚ  ಜೀರಿಗೆ, ಸಾಸಿವೆ, ಉಪ್ಪು, 2 ಮೆಣಸಿನ ಕಾಯಿ ,5-6 ಹೋಳು ಬೆಳ್ಳುಳ್ಳಿ, 1/4 ಚಮಚ ಹರಿಸಿಣ ಪುಡಿ

ಮಾಡುವ ವಿಧಾನ: 
ಒಗ್ಗರಣೆಗೆ: ಪಾತ್ರೆಯಲ್ಲಿ ೧ ಚಮಚ ಎಣ್ಣೆ ಹಾಕಿ,ಕಾದ ಮೇಲೆ ಸಾಸಿವೆ, ಜೀರಿಗೆ,ಸ್ವಲ್ಪ ಜಜ್ಜಿದ ಬೆಳ್ಳುಳ್ಳಿ,ದೊಡ್ಡಕೆ ಹೆಚ್ಚಿದ ಮೆಣಸಿನ್ಕಾಯಿ ಹಾಕಿ ಸ್ವಲ್ಪ ಫ಼್ರೈ ಆದನಂತರ ಅದಕ್ಕೆ ಕಡಲೆ ಹಿಟ್ಟಿನ ಮಿಶ್ರಣವನ್ನ ಹಾಕುತ್ತಾ ಕದಡಿ, ನಂತರ ಅದಕ್ಕೆ ಮೊಸರನ್ನ ಹಾಕಿ ಒಂದು ಕುದಿ ಕುದಿಸಿ ಅದಕ್ಕೆ ಕಡಲೆ ಹಿಟ್ಟಿನ ಪಕೋಡಾಗಳನ್ನ ಹಾಕಿದರೆ ಮೊಸರಿನ ಖಡಿ ತಯ್ಯಾರು :) 

ಧನ್ಯವಾದಗಳು
ಸವಿತ ಎಸ್ ಆರ್

Thursday, January 20, 2011

ಕಾಡಿಗೆ..!


ನನ್ನ ಪುಟಾಣಿ ಮಗಳ ಹಣೆಗೆ ಪ್ರತಿ ದಿನ ಹಚ್ಚಲು ಅಂಗಡಿಯ ಕಾಡಿಗೆ ಉಪಯೋಗಿಸಬೇಡ, ಮನೆಯಲ್ಲೇ ಮಾಡಿಕೋ ಅಂತ ನನ್ನ ಅಜ್ಜಿ ಹೇಳಿ ಕೊಟ್ಟದ್ದರ ಬಗ್ಗೆ ಈ ಬರಹ. ಚಿಕ್ಕಮಕ್ಕಳಿಗಷ್ಟೇ ಅಲ್ಲ ನಾವು ಕೂಡಾ ಬಳಸಬಹುದು.

ಬೇಕಾಗುವ ಸಾಮಾನುಗಳು:
ಸಬ್ಬಕ್ಕಿ - ನಿಮಗೆ ಬೇಕಾದಷ್ಟು ( ಮೊದಲ ಸಲ ಮಾಡುವವರು 2 ಹಿಡಿಯಷ್ಟನ್ನ ತೆಗೆದುಕೊಳ್ಳಿ), ನೀರು

1. ಮೊದಲಿಗೆ ಸಬ್ಬಕ್ಕಿಯನ್ನ ಬಾಣಲೆಯಲ್ಲಿ ಹಾಕಿ ಸಣ್ಣ ಹುರಿಯಲ್ಲಿ ಚೆನ್ನಾಗಿ ಹುರಿಯಿರಿ, ಬಂಗಾರದ ಬಣ್ಣ/ಸ್ವಲ್ಪ ಕಪ್ಪು ಬಣ್ಣ ಬರುವವರೆಗು.
2. ಹುರಿದ ಸಬ್ಬಕ್ಕಿಯ ಬಾಣಲಿಗೆ ನೀರನ್ನು ಹಾಕಿ ಚೆನ್ನಾಗಿ ಕುದಿಸಿರಿ.
3. ಸಬ್ಬಕ್ಕಿ ಬೇಯುತ್ತಾ ಕಪ್ಪನೆಯ ಪಾಕದಂತೆ ಆಗುವವರೆಗೂ ಚಮಚದಲ್ಲಿ ಕದಡುತ್ತಿರಿ
4. ಬೆಂದ ಸಬ್ಬಕ್ಕಿಯನ್ನ ಅದೇ ಬಾಣಲೆಯಲ್ಲಿ ಮಸೆದು, ಗಟ್ಟಿಯಾದ ಪಾಕವನ್ನ ಟೀ ಸೋಸುವ ಜರಡಿಯಲ್ಲಿ ಸೋಸಿಕೊಂಡು ಪುಟಾಣಿ ಡಬ್ಬದಲ್ಲಿ ಶೇಖರಿಸಿಡಿ.
5. ಪಾಕವನ್ನ ಮನೆಯೊಳಗೇ ಒಣಗಿ ಗಟ್ಟಿಯಾಗಲು ಬಿಡಿ
6. ಬೆರಳನ್ನ ನೀರಲ್ಲಿ ಅದ್ದಿಕೊಂದು ಸ್ವಲ್ಪ ಕಪ್ಪನ್ನ ತೀಡಿದರೆ ಹಣೆಗೆ ಬೊಟ್ಟು ಇಡಲು ರೆಡಿ :)

 ಒಮ್ಮೆ ಮಾಡಿಟ್ಟುಕೊಂಡ ಕಾಡಿಗೆಯನ್ನ ಬಹಳ ದಿನಗಳವರೆಗೆ ಬಳಸಬಹುದು, ಹಾಳಾಗುವುದಿಲ್ಲ.

ಮುವ್ವತ್ತು ವರ್ಷಗಳ ಹಿಂದೆ ನನ್ನಜ್ಜಿ ಕಾಡಿಗೆಯನ್ನ ತಯಾರಿಸಿ ತೆಂಗಿನ ಚಿಪ್ಪಿನಲ್ಲಿ ಶೇಖರಿಸಿಟ್ಟು ತನ್ನ ಮಕ್ಕಳಿಗೆ & ಮೊಮ್ಮಕ್ಕಳಿಗೂ ಕೂಡ ಬಳಸಿ...ಕೊನೆಗೆ ನೆನಪಿಗಿರಲಿ ಅಂತ ನನಗೆ ಕೊಟ್ಟಿದ್ದಾರೆ. :)

ನಿಮಗೆ  ಕಾಡಿಗೆ ತಯಾರಿಸೋ ಬೇರೆ ವಿಧಾನಗಳು ಗೊತ್ತಿದ್ದರೆ ಹಂಚಿಕೊಳ್ಳಿ, ಉಪಯೋಗವಾದೀತು.
ಧನ್ಯವಾದಗಳು 
-ಸವಿತ ಎಸ್ ಆರ್

(ಚಿತ್ರ ಕೃಪೆ: ಸ್ವಂತದ್ದು)

Thursday, January 6, 2011

ಬೇಕಿವೆ ಜೋಗುಳಗಳು...

ತಿಂಗಳು ತುಂಬದ
ನನ್ನ ಕಂದಮ್ಮ
ರಚ್ಚೆ ಹಿಡಿದು
ಅತ್ತು ಕೂಗಿ ಕರೆವಾಗ
ಹಾಡಿ ತೂಗಿ ಮಲಗಿಸಲು
ಜೋಗುಳಗಳು ಬೇಕಿವೆ...

ಸದ್ಯಕ್ಕೆ ಗೊತ್ತಿರುವ
ಭಾವಗೀತೆಗಳನ್ನೇ
ತಿರು ತಿರುಗಿ
ಹಾಡಿ ಮಲಗಿಸುತ್ತಿರುವೆ!!

ಪ್ರಾಸ ಲಯಬದ್ದವಾಗಿ
ಹಳಬರು ರಚಿಸಿರುವ
ಸವಿಯಾಗಿ ಹಾಡಿ ಹೊಗಳಿ
ಮಕ್ಕಳನ್ನ ನಿದ್ರಾಲೋಕಕ್ಕೆ
ಕರೆದೊಯ್ಯುವ
ಲಾಲಿ ಪದಗಳಿರುವಾಗ...
ಭಾವಗೀತೆಗಳೇಕೆ?
ಇಷ್ಟು ಬೇಗ
ಎಂದೆನಿಸಿದೆ!

ಅದಕ್ಕೇ ಗೊತ್ತಿರುವವರು
ಬೇಗ ಹಂಚಿಕೊಳ್ಳಿ
ನಿಮ್ಮ ಬಳಿಯಿರುವ
ಲಾಲಿ ಪದಗಳನ್ನ
ಗೊತ್ತಿರದಿದ್ದರೆ ಕೇಳಿ ಬರೆಯಿರಿ
ನಿಮ್ಮ ಅಜ್ಜಿ, ತಾಯಿ,
ಸಹೋದರಿಯರನ್ನ :)

ಧನ್ಯವಾದಗಳು
ಸವಿತ ಎಸ್ ಆರ್