ನನ್ನ ಪುಟಾಣಿ ಮಗಳ ಹಣೆಗೆ ಪ್ರತಿ ದಿನ ಹಚ್ಚಲು ಅಂಗಡಿಯ ಕಾಡಿಗೆ ಉಪಯೋಗಿಸಬೇಡ, ಮನೆಯಲ್ಲೇ ಮಾಡಿಕೋ ಅಂತ ನನ್ನ ಅಜ್ಜಿ ಹೇಳಿ ಕೊಟ್ಟದ್ದರ ಬಗ್ಗೆ ಈ ಬರಹ. ಚಿಕ್ಕಮಕ್ಕಳಿಗಷ್ಟೇ ಅಲ್ಲ ನಾವು ಕೂಡಾ ಬಳಸಬಹುದು.
ಬೇಕಾಗುವ ಸಾಮಾನುಗಳು:
ಸಬ್ಬಕ್ಕಿ - ನಿಮಗೆ ಬೇಕಾದಷ್ಟು ( ಮೊದಲ ಸಲ ಮಾಡುವವರು 2 ಹಿಡಿಯಷ್ಟನ್ನ ತೆಗೆದುಕೊಳ್ಳಿ), ನೀರು
1. ಮೊದಲಿಗೆ ಸಬ್ಬಕ್ಕಿಯನ್ನ ಬಾಣಲೆಯಲ್ಲಿ ಹಾಕಿ ಸಣ್ಣ ಹುರಿಯಲ್ಲಿ ಚೆನ್ನಾಗಿ ಹುರಿಯಿರಿ, ಬಂಗಾರದ ಬಣ್ಣ/ಸ್ವಲ್ಪ ಕಪ್ಪು ಬಣ್ಣ ಬರುವವರೆಗು.
2. ಹುರಿದ ಸಬ್ಬಕ್ಕಿಯ ಬಾಣಲಿಗೆ ನೀರನ್ನು ಹಾಕಿ ಚೆನ್ನಾಗಿ ಕುದಿಸಿರಿ.
3. ಸಬ್ಬಕ್ಕಿ ಬೇಯುತ್ತಾ ಕಪ್ಪನೆಯ ಪಾಕದಂತೆ ಆಗುವವರೆಗೂ ಚಮಚದಲ್ಲಿ ಕದಡುತ್ತಿರಿ
4. ಬೆಂದ ಸಬ್ಬಕ್ಕಿಯನ್ನ ಅದೇ ಬಾಣಲೆಯಲ್ಲಿ ಮಸೆದು, ಗಟ್ಟಿಯಾದ ಪಾಕವನ್ನ ಟೀ ಸೋಸುವ ಜರಡಿಯಲ್ಲಿ ಸೋಸಿಕೊಂಡು ಪುಟಾಣಿ ಡಬ್ಬದಲ್ಲಿ ಶೇಖರಿಸಿಡಿ.
5. ಪಾಕವನ್ನ ಮನೆಯೊಳಗೇ ಒಣಗಿ ಗಟ್ಟಿಯಾಗಲು ಬಿಡಿ
6. ಬೆರಳನ್ನ ನೀರಲ್ಲಿ ಅದ್ದಿಕೊಂದು ಸ್ವಲ್ಪ ಕಪ್ಪನ್ನ ತೀಡಿದರೆ ಹಣೆಗೆ ಬೊಟ್ಟು ಇಡಲು ರೆಡಿ :)
ಒಮ್ಮೆ ಮಾಡಿಟ್ಟುಕೊಂಡ ಕಾಡಿಗೆಯನ್ನ ಬಹಳ ದಿನಗಳವರೆಗೆ ಬಳಸಬಹುದು, ಹಾಳಾಗುವುದಿಲ್ಲ.
ಮುವ್ವತ್ತು ವರ್ಷಗಳ ಹಿಂದೆ ನನ್ನಜ್ಜಿ ಕಾಡಿಗೆಯನ್ನ ತಯಾರಿಸಿ ತೆಂಗಿನ ಚಿಪ್ಪಿನಲ್ಲಿ ಶೇಖರಿಸಿಟ್ಟು ತನ್ನ ಮಕ್ಕಳಿಗೆ & ಮೊಮ್ಮಕ್ಕಳಿಗೂ ಕೂಡ ಬಳಸಿ...ಕೊನೆಗೆ ನೆನಪಿಗಿರಲಿ ಅಂತ ನನಗೆ ಕೊಟ್ಟಿದ್ದಾರೆ. :)
ನಿಮಗೆ ಕಾಡಿಗೆ ತಯಾರಿಸೋ ಬೇರೆ ವಿಧಾನಗಳು ಗೊತ್ತಿದ್ದರೆ ಹಂಚಿಕೊಳ್ಳಿ, ಉಪಯೋಗವಾದೀತು.
ಧನ್ಯವಾದಗಳು
-ಸವಿತ ಎಸ್ ಆರ್
(ಚಿತ್ರ ಕೃಪೆ: ಸ್ವಂತದ್ದು)
6 ಕಾಮೆಂಟ್(ಗಳು):
tumba informative namgoo kaadige bekadare :)
ಸವಿತಾ ಮೇಡಮ್,
ಈಗೀಗ ಎಲ್ಲರಿಗು ರೆಡಿಮೇಡ್ ಬೇಕು... ಇದೆಲ್ಲಾ ಮಾಡಲು ಮನಸ್ಸಿಲ್ಲ... ಸಮಯ ಇಲ್ಲ..... ಇದನ್ನು ಬರೆದು ಕೆಲವರಿಗಾದರೂ ಸಹಾಯ ಆಗಿದೆ.... ತುಂಬಾ ಧನ್ಯವಾದ... ನನ್ನವಳಿಗೆ ಕರೆದು ಇದನ್ನು ಓದಿಸಿದ್ದೇನೆ.....
ತುಂಬ ಸುಲಭವಾಗಿ ಕಾಡಿಗೆ ಮಾಡುವ ವಿಧಾನ ತಿಳಿಸಿದ್ದೀರ ಸವಿತ , ಧನ್ಯವಾದಗಳು. ನನ್ನ ಅಮ್ಮ ಕೂಡ ಕಣ್ಣಿಗೆ ಹಚ್ಚಲು ಕಾಡಿಗೆ ತಯಾರಿಸುತ್ತಾರೆ . ಒಂದಲಗದ ರಸದಲ್ಲಿ ನೆನೆಸಿದ ಬಟ್ಟೆಯಿಂದ ಮಾಡಿದ ಬತ್ತಿಯಿಂದ ಹರಳೆಣ್ಣೆ ದೀಪ ಬೆಳಗುತ್ತಾರೆ .ಬೆಳಗುತ್ತಿರುವ ದೀಪದ ಮೇಲೆ ಸ್ವಲ್ಪ ಓರೆಯಾಗಿ ಶುದ್ಧವಾದ ಪ್ಲೇಟ್ ಮುಚ್ಚುತ್ತಾರೆ. ಪ್ಲೇಟ್ ನಲ್ಲಿ ಸಂಗ್ರಹವಾದ ಕಪ್ಪು ಮಸಿಗೆ ಸ್ವಲ್ಪವೇ ಹರಳೆಣ್ಣೆ ಬೆರೆಸಿ ಶುದ್ಧವಾದ ಡಬ್ಬಿಯಲ್ಲಿ ಸಂಗ್ರಹಿಸುತ್ತಾರೆ . ಹೀಗೆ ತಯಾರಿಸಿದ ಕಾಡಿಗೆ ಕಣ್ಣಿಗೆ ತಂಪು ನೀಡುತ್ತದೆಂದು ಅವರ ಅಭಿಪ್ರಾಯ.
ಧನ್ಯವಾದಗಳು ಡಾಕ್ಟ್ರೇ..ನಿಮ್ಮ ಮನೆಯಲ್ಲೂ ಕಾಡಿಗೆಯ ಅವಶ್ಯಕತೆ ಬೇಗ ಬರಲಿ ಎಂದು ಹಾರೈಸುವೆ ;)
ಕಾಲಾಯ ತಸ್ಮೈನಮಃ ದಿನಕರರೇ :) ನಿಮಗುಪಯೋಗವಾಯ್ತೆನ್ನುವುದ ಕೇಳಿ ಖುಶಿಯಾಯ್ತು :)
ನಿಮ್ಮ ವಿಧಾನದವನ್ನ ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಸುಮ :) "ಒಂದಲಗದ ರಸ" ಅಂದ್ರೇನು ಅಂತ ಗೊತ್ತಾಗಲಿಲ್ಲ...ಅದರ ಬಗ್ಗೆ ತಿಳಿಸುತ್ತೀರಾ..
Post a Comment