Friday, March 11, 2011

ರಾಗಿ ಹಲ್ವ ಅಥವಾ ರಾಗಿ ಕಿಲ್ಸ

ಚಿಕ್ಕಂದಿನಿಂದಲೂ ನನ್ನ ಎಲ್ಲಾ ಹುಟ್ಟುಹಬ್ಬಗಳಿಗೆ ನನ್ನಮ್ಮ ಪ್ರೀತಿಯಿಂದ ಮಾಡಿಕೊಡುವ ಈ ರಾಗಿ ಕಿಲ್ಸವೇ ನನ್ನ ಅತಿ ಮೆಚ್ಚಿನ ಕೇಕು. ಇನ್ಮುಂದೆ ನನ್ನ ಮಗಳಿಗೂ ಸಹ ನಾನು ಮಾಡಿಕೊಡಲು ಕಲಿತ ರೆಸಿಪಿಯಿದು :)  ಚಿತ್ರದುರ್ಗ,ದಾವಣಗೆರೆ ಕಡೆಗಳಲ್ಲಿ ಮತ್ತು ಹೆಚ್ಚಾಗಿ ರಾಗಿ ಬೆಳೆಯುವ ಪ್ರದೇಶಗಳಲ್ಲಿ ಇದನ್ನ ತಯಾರಿಸುತ್ತಾರೆ. ಆದರೆ ಇದಿನ್ನೂ ಹೆಚ್ಚು ಪ್ರಚುರ ಪಡಿಸದ ಸಿಹಿ ತಿನಿಸು. ಕಬ್ಬಿಣದಂಶ, ಕ್ಯಾಲ್ಸಿಯಂ ಹೆಚ್ಚಾಗಿರುವ ಇದನ್ನ ಮಾಡುವುದು ಅತಿ ಸುಲಭ ಮತ್ತು ರುಚಿಯಾದದ್ದು.

ಬೇಕಾಗುವ ಪದಾರ್ಥಗಳು:
ರಾಗಿ 1/4 ಕೆಜಿ
ಬೆಲ್ಲ 1/4 ಕೆಜಿ
ಏಲಕ್ಕಿ ಪುಡಿ 1/4 ಚಮಚ
ಗಸಗಸೆ 2 ಚಮಚ
ತುರಿದ ಕೊಬ್ಬರಿ 5 ಚಮಚ
ತುಪ್ಪ 1 ಚಮಚ


 ಮಾಡುವ ವಿಧಾನ:
1. ಬೆಳಗ್ಗೆ ರಾಗಿಯನ್ನ 10-12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ
2. ಸಂಜೆ ಹೊತ್ತಿಗೆ ನೆನೆದ ರಾಗಿಯನ್ನ ಮಿಕ್ಸರಿನಲ್ಲಿ ಸಾಕಷ್ಟು ನೀರಿನೊಟ್ಟಿಗೆ ನುಣ್ಣಗೆ ರುಬ್ಬಿಕೊಳ್ಳಿ. ಬಿಳಿ ಬಟ್ಟೆ
   ಇಲ್ಲವೆ ಅತಿ ಸಣ್ಣ ರಂದ್ರದ ಜರಡಿಯಲ್ಲಿ ರಾಗಿ ಹಾಲನ್ನ ಸೋಸಿಟ್ಟುಕೊಳ್ಳಿ.
3. ಬೆಲ್ಲದಲ್ಲಿರುವ ಕಲ್ಲುಗಳನ್ನ ತೆಗೆಯಲು ಮೊದಲು ಬೆಲ್ಲವನ್ನ ಪುಡಿ ಮಾಡಿಕೊಂಡು ಬಿಸಿ ನೀರಿನಲ್ಲಿ ಹಾಕಿ,  
   ಕರಗಿದ ಬೆಲ್ಲದ ನೀರನ್ನ ಜರಡಿಯಲ್ಲಿ ಸೋಸಿಟ್ಟುಕೊಳ್ಳಿ.
4. ದೊಡ್ಡ ಪಾತ್ರೆಯಲ್ಲಿ ಈ ಬೆಲ್ಲದ ನೀರನ್ನ ಸುರಿದು ಸ್ಟವ್ ಮೇಲೆ ಮಧ್ಯಮ ಉರಿಯಲ್ಲಿ ಕುದಿಯಲು
   ಬಿಡಿ,ಇದಕ್ಕೆ ಏಲಕ್ಕಿ ಪುಡಿಯನ್ನ ಹಾಕಿ. ಮೊದಲ ಕುದಿ ಬಂದಾಗ ಮುದ್ದೆ ಕೋಲು ಅಥವಾ ದೊಡ್ಡ
   ಚಮಚದಲ್ಲಿ ಬೆಲ್ಲದ ನೀರನ್ನ ಕದಡುತ್ತಾ ನಿಧಾನವಾಗಿ ರಾಗಿಯ ಹಾಲನ್ನ ಸುರಿಯುತ್ತಾ ಬನ್ನಿ,
   ಕದಡುವಿಕೆಯ ಕ್ರಿಯೆ ಹಾಗೇ 10 ರಿಂದ 15 ನಿಮಿಷದವರೆಗೆ ಮುಂದುವರೆಯಲಿ. ಈ ಮಿಶ್ರಣ ನಿಧಾನವಾಗಿ
   ಗಟ್ಟಿಯಾಗುತ್ತಾ ಬರುತ್ತದೆ. ತಳ ಹತ್ತಲು ಅಥವಾ ತಳ ಸೀದುಹೋಗಲು ಬಿಡಬೇಡಿ.
5. ಹೀಗೆ ಗಟ್ಟಿಯಾದ ಮಿಶ್ರಣವನ್ನ ತುಪ್ಪ ಸವರಿದ ದೊಡ್ಡ ಹರಿವಾಣದಲ್ಲಿ ಸುರಿದು ಅದರ ಮೇಲೆ ಗಸಗಸೆ
   ಮತ್ತು ತುರಿದ ಕೊಬ್ಬರಿಯನ್ನ ಹರಡಿರಿ.ಈ ತಟ್ಟೆಯನ್ನ ತಂಪಾದ ಜಾಗದಲ್ಲಿಟ್ಟು ರಾತ್ರಿಯಿಡೀ ಬಿಟ್ಟರೆ ಬೆಳಗ್ಗೆ
   ಹೊತ್ತಿಗೆ ರಾಗಿ ಕಿಲ್ಸ ರೆಡಿ.
6. ತುಪ್ಪ ಸವರಿದ ಚಾಕುವಿನಿಂದ ಚೆಂದಾಗಿ ಚೌಕಾಕಾರ ಅಥವಾ ನಿಮಗಿಷ್ಟವಾದ ಆಕೃತಿಗೆ ಕತ್ತರಿಸಿಕೊಂಡು
   ತುಪ್ಪದೊಟ್ಟಿಗೆ ತಿಂದರೆ ರಾಗಿ ಕಿಲ್ಸ ಬಲು ರುಚಿ ಮತ್ತು ದೇಹಕ್ಕೆ ತಂಪು.

ಬಾಳಿಕೆ:
ಹಾಗೇ ಹೊರಗಿಟ್ಟರೆ ಒಂದು ದಿನದವರೆಗೆ ಸೇವಿಸಬಹುದು, ಫ್ರಿಜ್ಜಿನಲ್ಲಿಟ್ಟರೆ 1-2 ದಿನಗಳವರೆಗೆ ಉಪಯೋಗಿಸಬಹುದು.
(ಚಿತ್ರಕೃಪೆ: ಸ್ವಂತದ್ದು )

ನಿಮ್ಮ ರೆಸಿಪಿಯನ್ನ ಕಳಿಸಿದ್ದೀರಾ? ಮಾರ್ಚ್ 20, 2011 ರವರೆಗೆ ಸಮಯವಿದೆ ಬೇಗ ಕಳಿಸಿ.

Monday, March 7, 2011

ಅಂಬಲಿ

ವಾರದಲ್ಲಿ ಒಂದು ದಿನವಾದರೂ ನಮ್ಮನೇಲಿ  ಬೆಳಗಿನ ಉಪಹಾರಕ್ಕೆ ಎಲ್ರಿಗೂ ಅಂಬಲಿ ಬೇಕೇ ಬೇಕು.  :)
ಇದನ್ನ ಗಟ್ಟಿಯಾಗಿ ಮಾಡಿ ಅಗಿದು ನುಂಗಬಹುದು, ದ್ರವ ರೂಪದಲ್ಲಿ ಮಾಡಿಕೊಂಡು ಕೂಡಾ ಕುಡಿಯಬಹುದು.ಅದಕ್ಕೇ ಅಂಬಲಿಯನ್ನ ಮಾಡುವಾಗ ಬಳಸುವ ಪದಾರ್ಥಗಳ ಅಳತೆ ಇಂತಿಷ್ಟೇ ಇರಬೇಕೆಂದಿಲ್ಲ...ನಿಮಗೆ ಬಿಟ್ಟಿದ್ದು. ಹೇಗೆ ಮಾಡಿದರೂ ಚೆಂದ. :) ರಾಗಿ ನಮ್ಮ ದೇಶಕ್ಕೆ ಬಂದು ನಾಲ್ಕು ಸಾವಿರ ವರ್ಷಗಳಾಗಿವೆಯಂತೆ. ಕಬ್ಬಿಣದಂಶ, ಕ್ಯಾಲ್ಸಿಯಂ ಹೆಚ್ಚಾಗಿರುವ ಮತ್ತು ಸಿಕ್ಕಾಪಟ್ಟೆ ಶಕ್ತಿ ನೀಡುವ ಇದನ್ನ ತಯಾರಿಸಲು ಬಹಳ ಸುಲಭ ಮತ್ತು ದೇಹಕ್ಕೂ ತಂಪು.

ಬಳಸುವ ಪದಾರ್ಥಗಳು: [ಅಳತೆ ಇಂತಿಷ್ಟೇ ಇರಬೇಕೆಂದಿಲ್ಲ ನಿಮಗೆ ಬಿಟ್ಟಿದ್ದು]
ರಾಗಿ ಗಂಜಿ ಅಥವಾ ರಾಗಿ ಮುದ್ದೆ,
ಅನ್ನ,
ಉಪ್ಪು,
ಮೊಸರು,
ಈರುಳ್ಳಿ (ಸಣ್ಣಗೆ ಹೆಚ್ಚಿದ್ದು)
ರಾಗಿ ಗಂಜಿ -> ನೀರಿಗೆ ಸ್ವಲ್ಪ ರಾಗಿ ಹಿಟ್ಟನ್ನ ಕದಡಿ ಚೆನ್ನಾಗಿ ಕುದಿಸಿದರೆ ರಾಗಿ ಗಂಜಿಯಾಗುತ್ತದೆ
ರಾಗಿ ಮುದ್ದೆ ಉಪಯೋಗಿಸುವುದಾದರೆ: ರಾಗಿ ಮುದ್ದೆಯನ್ನ ಚಿಕ್ಕ ಚಿಕ್ಕ ತುತ್ತುಗಳನ್ನಾಗಿ ಮಾಡಿಕೊಂಡು, ನೀರಿನೊಟ್ಟಿಗೆ ಮಿಕ್ಸರಿನಲ್ಲಿ ಒಂದೆರಡು ಸಾರಿ ಸುತ್ತಿಸಿ ರಾಗಿ ಗಂಜಿಯ ರೀತಿ ತೆಳುವಾಗಿ ಮಾಡಿಕೊಳ್ಳಿ.

ಮಾಡುವ ವಿಧಾನ:
1. ಅನ್ನವನ್ನ ನೀರಿನೊಟ್ಟಿಗೆ ಮಿಕ್ಸರಿನಲ್ಲಿ ಒಂದೆರಡು ಸುತ್ತು ಸುತ್ತಿಸಿ, ಅನ್ನದಗಳು ಒಂದೆರಡು ತುಂಡಾದರೆ ಸಾಕು.
2. ಅನ್ನ ಮತ್ತು ರಾಗಿ ಗಂಜಿ ಮಿಶ್ರಣವನ್ನ ಒಂದು ಪಾತ್ರೆಯಲ್ಲಿ ಹಾಕಿ. ನಾನು ಸಾಮಾನ್ಯವಾಗಿ 60% ಅನ್ನದ ಮಿಶ್ರಣಕ್ಕೆ 40% ರಾಗಿ ಗಂಜಿಯನ್ನ ಬಳಸುತ್ತೇನೆ.
3. ಅದಕ್ಕೆ ಇನ್ನಷ್ಟು ನೀರನ್ನ ಹಾಕಿ ಕಲಸಿಡಿ. ಇದನ್ನ ರಾತ್ರಿ ಮಾಡಿಟ್ಟರೆ ಬೆಳಗ್ಗೆಗೆ ಚೆನ್ನಾಗಿ ನೆನೆದಿರುತ್ತದೆ.
4. ಬೆಳಗ್ಗೆ ಈ ಮಿಶ್ರಣಕ್ಕೆ ನೀರು, ಸಾಕಾಗುವಷ್ಟು ಉಪ್ಪು, ಮೊಸರು, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕದಡಿದರೆ ಕುಡಿಯಲು ಅಂಬಲಿ ರೆಡಿ.
5. ಜೊತೆಗೆ ನೆಂಚಿಕೊಳ್ಳಲು ಕಾಯಿ ಚೆಟ್ನಿ ಮತ್ತು ಮಾವಿನಕಾಯಿ ಉಪ್ಪಿನಕಾಯಿದ್ದರೆ ರುಚಿ ಬಲು ಸೊಗಸು.

ಅಂಬಲಿಯನ್ನ ಮಾಡಿಕೊಂಡು ಕುಡಿದು ನೋಡಿ ಮತ್ತು ನೀವು ಬೇರೆ ರೀತಿಯಲ್ಲಿ ತಯಾರಿಸುತ್ತಿದ್ದರೆ ತಿಳಿಸಲು ಮರೆಯಬೇಡಿ :)
ಧನ್ಯವಾದಗಳು
ಸವಿತ ಎಸ್ ಆರ್