ನಮ್ಮನೇಲಿ ಈ ಬದನೇಕಾಯಿ ಬಜ್ಜಿಯ ಪಾತ್ರ ಸೇವಿಯರ್ ತರಹದ್ದು!! ರಾತ್ರಿ ಊಟಕ್ಕೆ ಸಾರು ಸ್ವಲ್ಪ ಇದೆ, ಮತ್ತೆ ಸಾರು ಮಾಡ್ಬೇಕಾ??! ಅನ್ನುವ ಗಳಿಗೆ ಬಂದಾಗ ನೆರವಿಗೆ ಬರೋದು ಈ ಬದನೇಕಾಯಿ ಬಜ್ಜಿ, ಅತಿ ಬೇಗ ಮಾಡಬಹುದು ಮತ್ತು ರುಚಿ ರುಚಿ ಕೂಡಾ :)
ಬೇಕಾಗುವ ಪದಾರ್ಥಗಳು:
4-5 ಸಣ್ಣಗೆ ಹೆಚ್ಚಿದ ನೇರಳೇ ಬಣ್ಣದ ಬದನೇಕಾಯಿಗಳು
3 ಟೊಮ್ಯಾಟೋಗಳು
3 ಹಸಿ ಮೆಣಸಿನಕಾಯಿಗಳು
ಬೆಳ್ಳುಳ್ಳಿ - 5 ಎಸಳುಗಳು
ಕೊತ್ತಂಬರಿ ಸೊಪ್ಪು ಸ್ವಲ್ಪ
ಉಪ್ಪು - ರುಚಿಗೆ ತಕ್ಕಷ್ಟು
ಎಣ್ಣೆ - 3 ಚಮಚ
ನೀರು- ಬೇಕಾದರೆ ಮಾತ್ರ
ಮಾಡುವ ವಿಧಾನ:
1. ಬದನೇಕಾಯಿಗಳನ್ನ ಸಣ್ಣಗೆ ಹೆಚ್ಚಿಕೊಂಡು ದಪ್ಪ ತಳದ ಬಾಣಲೆಗೆ 2 ಚಮಚ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬದನೇಕಾಯಿ ಬೇಯುವವರೆಗೆ (ಹತ್ತು ನಿಮಿಷದವರೆಗೆ) ಉರಿದುಕೊಳ್ಳಿ.
2. ನಂತರ ಬದನೇಕಾಯಿಯನ್ನ ತೆಗೆದು ಅದೇ ಬಾಣಲೆಯಲ್ಲಿ 1 ಚಮಚ ಎಣ್ಣೆ ಹಾಕಿ ಟೊಮ್ಯಾಟೋಗಳನ್ನ ಮತ್ತು ಹಸಿಮೆಣಸಿನಕಾಯಿಯನ್ನ ಉರಿದುಕೊಳ್ಳಿ.
3. ನಂತರ ಉರಿದ ಬದನೇಕಾಯಿ, ಟೊಮ್ಯಾಟೊ, ಮೆಣಸಿನಕಾಯಿ,ಹಸಿ ಬೆಳ್ಳುಳ್ಳಿ, ಕೊತ್ತಂಬರಿಸೊಪ್ಪು, ಉಪ್ಪನ್ನ ಹಾಕಿ ಒಳಕಲ್ಲಿನಲ್ಲಿ ಅಥವಾ ಮಿಕ್ಸರಿನಲ್ಲಿ ಒಂದೆರಡು ಸುತ್ತು ರುಬ್ಬಿದರೆ ಬದನೇಕಾಯಿ ಬಜ್ಜಿ ರೆಡಿ.
ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ ಕಡೆಯ ಮನೆಗಳಲ್ಲಿ ಈ ಬದನೇಕಾಯಿ ಬಜ್ಜಿ ಬಲು ಫೇಮಸ್!! ನಮ್ಮ ಪಕ್ಕದ ಮನೆಯಕ್ಕ ಮಾಡುತ್ತಿದ್ದ ರೀತಿ ಇನ್ನೂ ನೆನಪಿದೆ, ಮಣ್ಣಿನ ಒಲೆಯಲ್ಲಿ ಅಡುಗೆಯೆಲ್ಲಾ ಆದಮೇಲೆ ಉಳಿದ ಕೆಂಡದ ಮೇಲೆ ಈ ಬದನೇಕಾಯಿ,ಟೊಮ್ಯಾಟೊ, ಮೆಣಸಿನಕಾಯಿಯನ್ನ ಹಾಕಿ ನಿಧಾನ ಗತಿಯಲ್ಲಿ ಸುಟ್ಟು ತಣ್ಣಗಾದ ಮೇಲೆ ಉಳಿದ ಪದಾರ್ಥಗಳನ್ನ ಹಾಕಿಕೊಂಡು ಮಸೇಗುಂಡು/ಮಸೇಕಲ್ಲಿನಲ್ಲಿ ಮಸೆಯುತ್ತಿದ್ರು. ಮುದ್ದೆ,ಅನ್ನ,ರೊಟ್ಟಿ,ಚಪಾತಿಯೊಟ್ಟಿಗೆ ಒಳ್ಳೇ ಕಾಂಬಿನೇಷನ್.
ಚಿತ್ರಕೃಪೆ: ಸ್ವಂತದ್ದು
ಬಳಕೆ: 4-5 ಗಂಟೆಗಳು
0 ಕಾಮೆಂಟ್(ಗಳು):
Post a Comment