Sunday, August 11, 2013

ಕುಮಾರವ್ಯಾಸನ ಐತಿಹಾಸಿಕ ಕತೆ


ಕವಿಯ ನಿಜವಾದ ಹೆಸರು ನಾರಣಪ್ಪ. ಕಾವ್ಯ ನಾಮ ಕುಮಾರವ್ಯಾಸ (ತಾನು ವ್ಯಾಸನ ಮಗ), ಗದುಗಿನ ಕೋಳೀವಾಡದವರು.ಕಾಲ ೧೪೩೦. ಗದುಗಿನ ಭಾರತ/ಕುಮಾರವ್ಯಾಸ ಭಾರತವನ್ನ ಬರೆದ್ದದ್ದಕ್ಕೂ ಒಂದು ಐತಿಹಾಸಿಕ ಕತೆಯಿದೆ.  
ಒಮ್ಮೆ ಕುಮಾರವ್ಯಾಸನ ಕನಸಿನಲ್ಲಿ ವೀರನಾರಾಯಣನು ಬಂದು "ನೀನು ಭಾರತವನ್ನ ಕನ್ನಡದಲ್ಲಿ ಬರೆಯೆಂದಪ್ಪಣೆ ಕೊಟ್ಟನಂತೆ", ಆದ್ರೆ ನಾನು ವಿದ್ವಾಂಸನಲ್ಲ ನನಗೆ ಭಾರತದ ಕತೆ ಗೊತ್ತಿಲ್ಲವೆಂದದ್ದಕ್ಕೆ... ಗೊತ್ತಿಲ್ಲದಿದ್ದರೇನಂತೆ  ಭಾರತವನ್ನ ಕಣ್ಣಾರೆ ಕಂಡವರಿಂದ ಕೇಳಿ ಬರೆ ಎಂದರಂತೆ. ವೇದವ್ಯಾಸ, ಕೃಪ, ಅಶ್ವತ್ಥಾಮರು ಚಿರಂಜೀವಿಗಳು. ಆದ್ರೆ ಅವರನ್ನ ಕಾಣುವುದು ಹೇಗೆ? ಅಂತ ಕೇಳಿದ್ದಕ್ಕೆ. ನೀನು ಲಕ್ಷ ಬ್ರಾಹ್ಮಣ ಸಂತರ್ಪಣೆಗೆ   ಹೋಗು ಅಲ್ಲಿಗೆ ಅಶ್ವತ್ಥಾಮ ಬರುತ್ತಾನೆಂದರಂತೆ.
  
ಕುಮಾರವ್ಯಾಸ ಲಕ್ಷ  ಬ್ರಾಹ್ಮಣ ಸಂತರ್ಪಣೆಗೆ ಹೋದಾಗ ಊಟದ ಸಾಲಿನಲ್ಲಿ ಕುಳಿತ ಅವನ ಎದುರಿಗೆ ಮಹಾಬಲಶಾಲಿಯಾದ ವೃದ್ಧರೊಬ್ಬರು ಕುಳಿತಿದ್ದರಂತೆ. ಸಾಲಿನಲ್ಲಿ ಊಟದೆಲೆಯನ್ನ ಹಾಕುತ್ತಾ ಹೋದಾಗ ಪಕ್ಕದಲ್ಲಿದ್ದ ಸಣ್ಣಹುಡುಗನಿಗೆ ಸಣ್ಣ ಎಲೆಯನ್ನ ಹಾಕಿದ್ರಂತೆ, ಅವನು ನನಗೆ ದೊಡ್ಡ ಎಲೆ ಬೇಕೆಂದು ಹಠ ಮಾಡ್ದಾಗ "ಏಕೆ ದುರ್ಯೋಧನನ ಹಾಗೆ ಹಠಮಾಡುತ್ತಿರುವೆ" ಅಂತ ಬೈದಾಗ ಅದನ್ನ ಕೇಳಿದ ಕ್ಷಣವೇ ಆ ವೃದ್ಧ ಕಣ್ನೀರಿಟ್ಟು ಎದ್ದು ಹೋದರಂತೆ.

ಈತನೇ ಅಶ್ವತ್ಥಾಮನಿರಬೇಕೆಂದು ಹಿಂಬಾಲಿಸಿದಾಗ ಆತ ನನ್ನಿಂದೆ ಬರಬೇಡೆಂದು ಬೈದು ಹೇಳಿದರೂ ಬಿಡದಿದ್ದಕ್ಕೆ ಏತಕ್ಕೆ ನನ್ನಿಂದೆ ಬರುತ್ತಿರುವೆ ನಿನ್ನುದ್ದೇಶವೇಂದು ಕೇಳಿದಾಗ ಕುಮಾರವ್ಯಾಸ ತನ್ನ ಕನಸಿನ ಬಗ್ಗೆ ಹೇಳಿದನಂತೆ. ಆಗ ಅಶ್ವತ್ಥಾಮನು "ನೀನು ಗದುಗಿನ ವೀರನಾರಾಯಣನ ಗುಡಿಯ ಮುಂದೆ ಪುಷ್ಕರಣಿಯಲ್ಲಿ ಮುಳುಗಿ ದೇವಾಲಯದಲ್ಲಿ ಕುಳಿತುಕೋ ನಿನ್ನ ನೆಂದ ಬಟ್ಟೆ ಆರುವವರೆಗೆ ನಿನಗೆ ಕಾವ್ಯ ತಂತಾನೆ ಬರುತ್ತದೆ. ಆದ್ರೆ ಈ ವಿಷಯವನ್ನ ಯಾರಿಗಾದರೂ ಹೇಳಿದರೆ ನಿನ್ನ ತಲೆ ಒಡೆದು ಹೋಗುತ್ತೆ" ಅಂತೇಳಿ ಮಾಯವಾದರಂತೆ. ಕುಮಾರವ್ಯಾಸ ಹತ್ತು ಪರ್ವ ಬರೆದು ಸಂತೋಷದಿಂದ ಅದರ ಹಿಂದಿನ ರಹಸ್ಯವನ್ನ ಹೇಳಿದಾಗ ಆತನ ಮರಣವಾಯ್ತೆಂದು  ಹೇಳ್ತಾರೆ.

ಈ ಕತೆ ಕೇಳಿದ ಮೇಲೆ ಗದುಗಿನ ವೀರನಾರಾಯಣನ ಗುಡಿ,ಪುಷ್ಕರಣಿ, ಆತ ಕುಳಿತು ಕಾವ್ಯಬರೆದ ಸ್ಥಳವನ್ನೊಮ್ಮೆ ನೋಡಿಬರಬೇಕೆಂಬ ಕುತೂಹಲವಿದೆ. ನೀವ್ಯಾರಾದ್ರೂ ಹೋಗಿದ್ರೆ ನಿಮ್ಮನುಭವಗಳನ್ನ ತಿಳಿಸಿ.

Saturday, January 19, 2013

ನನ್ಮಗಳು ವರ್ಷ ಬಿಡಿಸಿದ ಮೊದಲ ನೀರ್ಬಣ್ಣ ಚಿತ್ರಗಳು!


ನಮ್ಮಪುಟಾಣಿ ವರ್ಷ ಇವತ್ತು ಮೊದಲ ಬಾರಿಗೆ ಕುಂಚವನ್ನ ಬಣ್ಣದಲ್ಲದ್ದಿ ಪೇಪರ್ ಮೇಲೆ ಫ್ರೀಫ್ಲೋನಲ್ಲಿ ಚಿತ್ರ ಬಿಡಿಸಿದ್ಲು :) ಆ ಕ್ಷಣವನ್ನ ಸೆರೆ ಹಿಡಿಯುವ ತವಕದಲ್ಲಿದ್ದೆ ನಾನು, ಆದ್ರೆ ನನ್ನ ನೆನಪುಗಳು ಬೆಳಕಿನ ವೇಗದಲ್ಲಿ ಸರ್ರನೆ ಹಿಂದೋಡಿ ಅದೊಂದು ಕಾಲಘಟ್ಟದ ಚಿತ್ರಣವನ್ನ ನನ್ನ ಕಣ್ಮುಂದಿರಿಸಿತ್ತು. ಆ ಚಿತ್ರಣದಲ್ಲಿ ನಾನು ಪುಟಾಣಿ ವರ್ಷಳಂತೆ ಕುಳಿತು ಚಿತ್ರಕ್ಕೆ ಬಣ್ಣ ತುಂಬುತ್ತಿದ್ದೆ. ಪಕ್ಕದಲ್ಲಿ ನನ್ನಪ್ಪ ಅವೆಷ್ಟೊಂದು ಚೌಕಾಕಾರದ ಬಣ್ಣಗಳಿದ್ದ ನೀರ್ಬಣ್ಣಗಳ ಡಬ್ಬವನ್ನ ಕೈಲಿಟ್ಟುಕೊಂಡು ಈ ಬಣ್ಣ ಹಚ್ಚು ಆ ಬಣ್ಣ ಹಚ್ಹು... ಅಂತೇಳ್ತಿದ್ರು.ಅದೊಂತರ ನೋಸ್ಟಾಲ್ಜಿಕ್ ಕ್ಷಣಗಳಾಗಿದ್ವು. ವರ್ಷಪುಟಾಣಿ ಚಿತ್ರಗಳನ್ನ ಬಿಡಿಸಿದ್ಲು ನಾನು ಫೋಟೋ ಕ್ಲಿಕ್ಕಿಸಿದೆ.


ನನ್ಪುಟಾಣಿ ಬಿಡಿಸಿದ ಮೊದಲ ನಾಲ್ಕು ನೀರ್ಬಣ್ಣ ಚಿತ್ರಗಳು ಇಲ್ಲಿವೆ, ಚೆಂದಿವೆಯಲ್ವಾ!! ಅದಕ್ಕಂತೂ ಖುಷಿಯೋ ಖುಷಿ, ಚಿತ್ರದ ಪೇರರ್ರನ್ನ ಕೈಲಿಡಿದು ಎಲ್ರಿಗೂ ತೋರಿಸುತ್ತಾ ಮನೆತುಂಬೆಲ್ಲಾ ಓಡಾಡಿದ್ಲು. :) 

ಧನ್ಯವಾದಗಳು 
ಸವಿತ ಎಸ್ ಆರ್

This is the moment! Varsha's first painting moments!!!! :) I was telling her to paint here & there..pick this color...my memories just went back to my first painting moment! i was holding the paint brush & my dad was sitting next to me holding the watercolor paint box which had so many colors & he was telling me the same! It was pretty nostalgic moment for me :) Thank you Varsha PuTaaNI :)

Friday, January 18, 2013

ಕುಮಾರವ್ಯಾಸ ಭಾರತ

ಬಹಳ ಬಹಳ ದಿನಗಳ ನಂತರ ನನ್ನ ಬ್ಲಾಗ್ಮನೆಗೆ ಮತ್ತೆ ಬರೆಯಲು ಬಂದಿದ್ದೇನೆ,ಮತ್ತೊಮ್ಮೆ ನಿಮಗೆ ಸ್ವಾಗತ. :)

ಒಮ್ಮೆಯಾದರೂ ಹಳಗನ್ನಡದ ಪುಸ್ತಕವನ್ನ ಓದಲೇಬೇಕೆಂಬ ಆಸೆ ಚಿಕ್ಕಂದಿನಿಂದಲೂ ಇತ್ತು. ಈ ವರ್ಷ ಕುಮಾರವ್ಯಾಸ ಭಾರತವನ್ನ ಓದೇ ಬಿಡೋಣವೆಂದು ನಿರ್ಧರಿಸಿ ಸಂಕ್ರಾಂತಿ ಹಬ್ಬದಂದು ಶುರು ಮಾಡಿದ್ದೇನೆ. ನೀವೂ ಬನ್ನಿ, ಜೊತೆಗೆ ಓದುವ. ನೀವಾಗಲೇ ಓದಿಯಾಗಿದ್ದರೆ ನಿಮ್ಮೋದಿನನುಭವಗಳನ್ನಂಚಿಕೊಳ್ಳಿ.
ಆದಿ ಪರ್ವ, ಸಂಧಿ-೧, ಪೀಠಿಕಾ ಸಂಧಿ

ಶ್ರೀವನಿತೆಯರಸನೆ ವಿಮಲ ರಾ |
ಜೀವ ಪೀಠನ ಪಿತನೆ ಜಗಕತಿ
ಪಾವನನೆ ಸನಕಾದಿ ಸಜ್ಜನ ನಿಕರ ದಾತಾರ
ರಾವಣಾಸುರಮಥನ ಶ್ರವಣ ಸು |
ಧಾವಿನೂತನ ಕಥನ ಕಾರಣ
ಕಾವುದಾತನ ಜನವ ಗದುಗಿನ ವೀರನಾರಯಣ ||೧||


ಅರ್ಥ: ಶ್ರೀ ಲಕ್ಷ್ಮೀದೇವಿಯರಸ ಶ್ರೀವಿಷ್ಣುವೇ,ತಾವರೆಯಲ್ಲಾಸೀನನಾದ ಹಿರಣ್ಯಗರ್ಭನ ತಂದೆಯೇ ,ಜಗತ್ತಿನಲ್ಲಿ ಪರಮ ಪವಿತ್ರನಾದವನೇ, ಸತ್ಪುರುಷರ ಸಮೂಹಕ್ಕೆ ಸಮಸ್ತ ಆನಂದವನ್ನು ಕೊಡುವವನೇ,ರಾವಣಾಸುರನ ಅಂತ್ಯವನ್ನ ನಿರೂಪಿಸಿದ,ಸದಾ ಕೇಳಲು ಮಂಗಳಕರವಾದ ಅಮೃತಸಮಾನವಾದ ಶ್ರೀರಾಮಾಯಣದ ನಾಯಕನೇ, ಗದುಗಿನ ವೀರನಾರಾಯಣನೇ, ಶರಣಾಗತರಾಗಿ ಬಂದು ನಿನಗೆ ವಂದಿಸುವ ಜನರನ್ನ ಕಾಪಾಡು.

ಫೇಸ್ಬುಕ್ಕಿನಲ್ಲಿ : ಕುಮಾರವ್ಯಾಸ ಭಾರತ