Monday, September 1, 2014

ರೈನರ್ ಮಾರಿಯಾ ರಿಲ್ಕ್...ಯುವ ಕವಿಗೆ ಬರೆದ ಪತ್ರಗಳು....

ರೈನರ್ ಮಾರಿಯಾ ರಿಲ್ಕ್ ಯುವ ಕವಿ ಕಾಪ್ಪಸ್ ಗೆ ಬರೆದ ಪತ್ರಗಳು ಪುಸ್ತಕ ಬಹು ಇಷ್ಟವಾಯ್ತು. ಓದುತ್ತಾ ಹೋದಂತೆ ಅರಿವಿಲ್ಲದೆಯೇ ಆ ಪತ್ರಗಳು ಮಗಾಗಿಯೇ ಬರೆದವೇನೋ ಅನ್ನಿಸುವುದು ಖಂಡಿತ. ಏಕಾಂತ, ಮೌನಕ್ಕೆ ರಿಲ್ಕ್ ತನ್ನ ಜೀವನದಲ್ಲಿ ಕೊಟ್ಟ ಆಯಾಮವನ್ನ ಆತನ ಪತ್ರಗಳೇ ಸೊಗಸಾಗಿ ತಿಳಿಸುತ್ತವೆ. 
 
ಮತ್ತೆ ಮತ್ತೆ ಓದಬೇಕೆನಿಸುವ ಕೆಲವು ಸಾಲುಗಳು....
 
ಒಂದಷ್ಟು ಕಾಲ ಈ ಪುಸ್ತಕಗಳಲ್ಲೇ ಬದುಕು. ಅವುಗಳಿಂದ ಏನು ಕಲಿಯಬಹುದೋ ಅದನ್ನು ಕಲಿತುಕೋ. ಅದಕ್ಕಿಂತ ಮಿಗಿಲಾಗಿ ಪುಸ್ತಕಗಳನ್ನು ಪ್ರೀತಿಸು. ಪುಸ್ತಕಗಳಿಗೆ ನೀನು ತೋರಿದ ಪ್ರೀತಿ ಸಾವಿರ ಪಟ್ಟು ಹೆಚ್ಚಾಗಿ ನಿನ್ನ ಬಳಿಗೆ ಮರಳುತ್ತದೆ. ಬದುಕಿನಲ್ಲಿ ನೀನು ಏನು ಬೇಕಾದರೂ ಆಗು, ನಿನ್ನ ಎಲ್ಲ ಅನುಭವ, ನಿರಾಶೆ,ಸಂತೋಷಗಳ ಎಳೆಗಳ ನಡುವೆ ಈ ಓದಿನ ಪ್ರೀತಿಯ ಎಳೆಗಳು ದೃಡವಾಗಿ ಬಲು ಮುಖ್ಯವಾಗಿ ಇರುತ್ತವೆ.
 
ನೀನು ಬರೆಯಲೇ ಬೇಕೆ,ಯಾಕೆ? ಎಂಬ ಕಾರಣವನ್ನು ಹುಡುಕಿಕೋ, ಬರೆಯಲೇಬೇಕೆಂಬ ಆಸೆ ಹೃದಯದ ಆಳದಲ್ಲಿ ಬೇರು ಬಿಟ್ಟಿದೆಯೋ, ಬರೆಯುವ ಅವಕಾಶ ನಿನಗೆ ದೊರೆಯದಿದ್ದರೆ ಸಾಯುತ್ತೀಯೋ-ನೋಡಿಕೋ. ಇದು ಮುಖ್ಯ. ಇರುಳಲ್ಲಿ, ನಿನ್ನ ಮನಸ್ಸು ಅತ್ಯಂತ ಶಾಂತವಾಗಿರುವಾಗ ಕೇಳಿಕೋ - ನಾನು ಬರೆಯಲೇ ಬೇಕೆ? ನಿನ್ನ ಅಂತರಂಗದ ಆಳಕ್ಕಿಳಿದು ಉತ್ತರ ಹುಡುಕು. ಸರಳವಾದ ದೃಡವಾದ 'ಹೌದು, ಬರೆಯಲೇಬೇಕು' ಎಂಬ ಉತ್ತರ ನಿನ್ನೊಳಗೆ ಮೊಳಗಿದರೆ ನಿನ್ನ ಇಡೀ ಬದುಕನ್ನು ಈ ಅಗತ್ಯಕ್ಕೆ ತಕ್ಕಂತೆ ಕಟ್ಟಿಕೋ. ಆಮೇಲೆ ಇದುವರೆಗೂ ಯಾರೂ ಹೇಳಿಯೇ ಇಲ್ಲವೇನೋ ಎಂಬಂತೆ ನೀನು ಕಂಡದ್ದು, ಅನುಭವಿಸಿದ್ದು, ಬಯಸಿದ್ದು,ಕಳೆದುಕೊಂಡದ್ದು ಎಲ್ಲವನ್ನೂ ಹೇಳಲು ಪ್ರಯತ್ನಿಸು.
 
ಅಗಾಧವಾಗಿರಬೇಕು ಈ ಮೌನ.ಸದ್ದುಗಳಿಗೆ ಚಲನೆಗಳಿಗೆ ಅವಕಾಶವಿರುವ ಮೌನ; ದೂರದ ಸಮುದ್ರದ ಮೊರೆತವೂ ಕೇಳುವ ಮೌನ; ಇತಿಹಾಸ ಪೂರ್ವ ಕಾಲದ ಸಾಮರಸ್ಯದ ಸ್ವರಗಳು ಕೇಳಿಸುವ ಮೌನ. ಈ ಅದ್ಭುತವಾದ ಏಕಾಂತವು ನಿನ್ನ ಮೇಲೆ ವರ್ತಿಸುವುದಕ್ಕೆ ನೀನು ಸಮಾಧಾನದಿಂದ ಅವಕಾಶ ಮಾಡಿಕೊಟ್ಟಿರುವೆ ಎಂದು ಆಶಿಸುತ್ತೇನೆ.
 
ನಿನ್ನ ಕವಿತೆಗಳು ಚೆನ್ನಾಗಿವೆಯೇ ಎಂದು ಕೇಳಿದ್ದೀಯೆ, ನನ್ನನ್ನು. ಈ ಮೊದಲೇ ಬೇರೆಯವರನ್ನೂ ಕೇಳಿದ್ದೀಯೆ. ಪತ್ರಿಕೆಗಳಲ್ಲಿ ಪ್ರಕಟವಾಗಲೆಂದು ಕಳಿಸಿದ್ದೀಯೆ. ಬೇರೆಯವರ ಕವಿತೆಗಳೊಂದಿಗೆ ಹೋಲಿಸಿಕೊಂಡು ನೋಡಿದ್ದೀಯೆ. ಕೆಲವು ಸಂಪಾದಕರು ನಿನ್ನ ಕವಿತೆಗಳನ್ನು ನಿರಾಕರಿಸಿ ಹಿಂದಿರುಗಿಸಿದಾಗ ಹತಾಶನಾಗಿದ್ದೀಯೆ. ಇಂಥ ಕೆಲಸ ಮಾಡುವುದನ್ನು ದಯವಿಟ್ಟು ನಿಲ್ಲಿಸು ಎಂದು ಕೋರುತ್ತೇನೆ. ನೀನು ನನ್ನ ಸಲಹೆ ಸೂಚನೆಗಳು ಬೇಕು ಎಂದು ಕೇಳಿದ್ದರಿಂದ ಈ ಮಾತು. ಈಗ ನೀನು ದೃಷ್ಟಿಯನ್ನು ಹೊರಗೆ ಹಾಯಿಸಿದ್ದೀಯೆ. ತಕ್ಷಣದಲ್ಲಿ ಮಾಡಬೇಕಾದ ಕೆಲಸವೆಂದರೆ ಹೀಗೆ 'ಹೊರಗೆ ನೋಡುವುದು' ನಿಲ್ಲಬೇಕು. ಯಾರೂ. ಯಾರೆಂದರೆ ಯಾರೂ ಕೂಡ ನಿನಗೆ ಸಲಹೆ ಕೊಡುವುದಕ್ಕೆ, ಉಪದೇಶ ಮಾಡುವುದಕ್ಕೆ, ಸಹಾಯ ಮಾಡುವುದಕ್ಕೆ ಸಾಧ್ಯವಿಲ್ಲ, ನಿನ್ನ ಒಳಹೊಕ್ಕು ನೋಡಿಕೋ.

ಪ್ರೇಮದಂತಹ ಸಾಮಾನ್ಯ ವಿಷಯಗಳ ಗೊಡವೆಗೆ ಹೋಗದೆ ದಿನ ನಿತ್ಯದ ಬದುಕು ನಿನಗೆ ಏನು ನೀಡುತ್ತದೆಯೋ ಅದರ ಬಗ್ಗೆ ಬರೆಯುವುದಕ್ಕೆ ತೊಡಗು. ನಿನ್ನ ದುಃಖ, ನಿನ್ನ ಆಸೆಗಳು, ನಿನ್ನ ಮನಸ್ಸಿನಲ್ಲಿ ಹಾಯ್ದು ಹೋಗುವ ಆಲೋಚನೆಗಳು, ನೀನು ನಂಬುವ ಸೌಂದರ್ಯದೊಂದು ರೂಪ, ಇವೆಲ್ಲವನ್ನೂ ಹೃತ್ಫೂರ್ವಕವಾಗಿ ಅನುಭವಿಸಿ, ವಿನಯ ತುಂಬಿದ ಪ್ರಾಮಾಣಿಕತೆಯೊಂದಿಗೆ ಹೇಳು. ಹೀಗೇ ನಿನ್ನನ್ನೇ ನೀನು ವ್ಯಕ್ತಗೊಳಿಸಿಕೊಳ್ಳುವಾಗ ನಿನ್ನ ಸುತ್ತಲೂ ಕಾಣುವ ವಸ್ತುಗಳನ್ನು, ನಿನ್ನ ಕನಸಿನಲ್ಲಿ ಕಂಡ ರೂಪಗಳನ್ನು,ನಿನ್ನ ನೆನಪಿನಲ್ಲಿ ಉಳಿದಿರುವ ಸಂಗತಿಗಳನ್ನು ಬಳಸಿಕೋ. 

"ನಿನ್ನ ದಿನನಿತ್ಯದ ಬದುಕು ರಿಕ್ತವಾದದ್ದು ಎನಿಸಿದರೆ ಬದುಕನ್ನು ನಿಂದಿಸಬೇಡ, ನಿನ್ನನ್ನೇ ನಿಂದಿಸಿಕೋ.... ಬದುಕಿನ ಶ್ರೀಮಂತಿಕೆಯನ್ನು ಕಾಣಲಾರದ ನಿನ್ನ ರಿಕ್ತತೆಯನ್ನು ನಿಂದಿಸಿಕೋ!"


ಇಷ್ಟು ಸೂಕ್ಷ್ಮವಾಗಿ ತಿಳಿ ಹೇಳುವ ಪತ್ರಗಳನ್ನ ಬರೆದ ಕವಿ ರಿಲ್ಕ್ ಗೆ,
ಅವು ನನಗಷ್ಟೇ ಅಲ್ಲ ಬೆಳೆಯುತ್ತಿರುವ ಪ್ರತಿ ಯುವ ಕವಿಗೆ ಅವಶ್ಯವಾದವೆಂದು ಪ್ರಕಟಿಸಿದ ಕವಿ ಕಾಪ್ಪಸ್ ಗೆ,
ಅವುಗಳನ್ನ ಕನ್ನಡಕ್ಕೆ ಅನುವಾದಿಸಿ ಹಳೆಯ ಮತ್ತು ಹೊಸ ಕವಿಗಳ ನಡುವೆ ಸಾತತ್ಯವನ್ನ ಬೆಸೆಯುವ ದಿಶೆಯಲ್ಲಿರುವ ನಮ್ಮ ಪ್ರೊ.ಓ.ಎಲ್.ಎನ್.ಸ್ವಾಮಿಯವರಿಗೆ ಧನ್ಯವಾದಗಳು.
-ಸವಿತ

No comments: